Tuesday, June 19, 2012

ರಾಗಿ ಮುದ್ದೆ ತಿನ್ನುವಂತದಲ್ಲ!


ಈ ದಿನ ಮನೆಗೆ ನಮ್ಮ ಮನೆಯವರ ಸೋದರ ಮಾವ ಬಂದಿದ್ದಾರೆ. ಮೈಸೂರು ಜಿಲ್ಲೆಯ, ಹುಣಸೂರಿನ ಬಳಿ ಒಂದು ಪುಟ್ಟ ಹಳ್ಳಿ ಅವರದು. ಪ್ರತಿ ವರ್ಷ ಅವರೇ ಬಿತ್ತಿ ಬೆಳೆಯುವ ಅಕ್ಕಿಯ ಮೂಟೆಯೊಂದನ್ನು ಮನೆಗೆ ತಂದು ಕೊಡುವ ಪದ್ಧತಿ ಅವರದು. ರೈತ ಬಂಧು - ನಮ್ಮ ಮನೆಯ ಅನ್ನದಾತ! ಇವರು ಬಂದಾಗಲೆಲ್ಲ ನನಗೊಂದು ಪುಟ್ಟ ಸಮಸ್ಯೆ! ಹಾಗೆ ನೋಡಿದರೆ ಅದು ದೊಡ್ಡ ಸಮಸ್ಯೆಯು ಹೌದು. ಇವರು ರಾಗಿ ಮುದ್ದೆ ಇಲ್ಲದೆ ಊಟ ಮಾಡುವ ಆಸಾಮಿ ಅಲ್ಲ. ಹಾಗೊಮ್ಮೆ-ಹೀಗೊಮ್ಮೆ ರಾಗಿ ಮುದ್ದೆಯನ್ನು ತಿನ್ನುತಿದ್ದ ನಾನು, ಅದು ತಿನ್ನುವಂತದಲ್ಲ, ನುಂಗುವಂತದ್ದು ಎನ್ನುವ ಸಂಗತಿ ಅರಿತು - ನುಂಗುವುದನ್ನು ಕಲೆಯಲು ಸುಮಾರು ವರ್ಷಗಳೇ ಹಿಡಿದವು. ಹೀಗಿರುವಾಗ, ಮನೆಯಲ್ಲಿ ರಾಗಿ ಮುದ್ದೆ ಅಷ್ಟು ಸುಲಭವಾಗಿ ಮಾಡುವುದೆಲ್ಲಿಂದ ಬರಬೇಕು? ಮನೆಯವರಿಗೆ ಇಷ್ಟವಾದರು ಮಾಡಲಿಕ್ಕೆ ಬರದೆ ಒದ್ದಾಡಿದ್ದುಂಟು. ಈ ಸಧ್ಯಕ್ಕೆ ನಮ್ಮ ಅನ್ನದಾತನಿಗೆ ರಾಗಿ ಮುದ್ದೆ ಊಟಕ್ಕೆ ಬಡಿಸಲು ಪಕ್ಕದ ಮನೆಯ ಸುನಿತರನ್ನು ಮಾಡಿಕೊಡುವಂತೆ ಕೇಳಿಕೊಳ್ಳಬೇಕು, ಅವರು ತಮ್ಮ ಕೆಲಸ ಕಾರ್ಯಗಳನೆಲ್ಲ ಬಿಟ್ಟು ನಮ್ಮ ಮನೆಗೆ ಬಂದು ಮುದ್ದೆ ಮಾಡಿಕೊಡಬೇಕು, ಅದನ್ನು ನೋಡಿ ನಮ್ಮ ಅನ್ನದಾತ, "ಇನ್ನು ಮುದ್ದೆ ಕಟ್ಲಿಕ್ಕೆ ಬರಕಿಲ್ವೇನವ್ವ" ಅಂತ ಡೈಲಾಗ್ ಹೊಡಿಬೇಕು, ಇದನ್ನ ಕೇಳಿಸಿಕೊಂಡ ನಮ್ಮ ರಾಯರು ನನ್ನ ಕಸಿವಿಸಿ ಗಮನಿಸಿ ಕಣ್ ಹೊಡೆದು ಹೋಗಬೇಕು, ಸಂಜೆ ಇದರ ಬಗ್ಗೆ ಮನೆಯಲ್ಲಿ ಒಂದು ಸಣ್ಣ ಚರ್ಚೆಯಾಗಬೇಕು....

ಮಾಡಲು ಬಾರದ ರಾಗಿಮುದ್ದೆ!
ನನ್ನವರಿಗಿಷ್ಟ ರಾಗಿಮುದ್ದೆ,
ಬಾರದು ನನಗೆ ಕಷ್ಟವೋ ಅಡುಗೆ!

ಅಮ್ಮನ ಕೇಳಿದೆ ಮಾಡುವ ರೀತಿ,
ಆದರು ಆಯಿತು ಎಲ್ಲ ಪಜೀತಿ!
ನಲ್ಲನ ಟೀಕೆ ಎಲ್ಲರ ಮುಂದೆ,
ನನಗೋ ಹಿಂಸೆ ನಾಚಿಕೆ ಒಳಗೆ!

ಆದರು ಬಿಡದೆ ಕಲಿಯಲು ಹೊರಟೆ
ಮಾಡುವುದ್ಹೆಂಗೆ? ಕಲೆಸುವುದೆಂಗೆ?
ವಿಧವಿಧವಾದ ಮುದ್ದೆಯ ಶೋಧನೆ,
ತಂದಿತು ನನ್ನಲಿ ಸಂಕಟ ರೋದನೆ!

ನೀರಿನ ಮುದ್ದೆ, ಗಟ್ಟಿಯ ಮುದ್ದೆ,
ಬೇಯದ ಮುದ್ದೆ, ಗಂಟಿನ ಮುದ್ದೆ!
ಹೇಗೆ ಮಾಡಿದರು ಕೆಟ್ಟಿತು ಮುದ್ದೆ,
ಕಾಡಿತು ನನ್ನ ಬಾರದೆ ನಿದ್ದೆ!

ತುಂಬಿದ ಕಂಗಳು ಹರಸಿತು ಗಂಗೆ,
ನಲ್ಲನ ತೋಳಲಿ ಅತ್ತಿದ್ದು ಹಿಂಗೆ!
ಹಣೆಗಿಟ್ಟ ಮುತ್ತಿನ ಸಾಂತ್ವನ
ಮನಸಿಗೆ ನೀಡಿತು ಪ್ರೀತಿಯ ಸಿಂಚನ

ಮುದ್ದಿನ ನಲ್ಲನ ಮುದ್ದೆಯ ಪ್ರೀತಿ
ಮಾಡಲು ಕಲಿಸಿತೆ ನನಗೊಂದು ದಿನ!

- ಬಾಳೊಂದು ಭಾವಗೀತೆ -

ಅದು ಹಾಗಿರಲಿ, ಹಾಗೇ ಇರಲಿ ಅಂದುಕೊಳ್ಳುವಾಗ ಬರೆದ ಈ ಕವನ 3Kಯಲ್ಲಿ ಪೋಸ್ಟ್ ಮಾಡಿದೆ: [ಇದನ್ನು ಕವನ ಎಂದು ಕರೆಯಲು ಈಗ ವಿಪರೀತ ಸಂಕಟ]. ಕವನಕ್ಕೆ ಬಂದ ಅಭಿಪ್ರಾಯ ಅನಿಸಿಕೆಗಳು ಪ್ರೇರಣಾತ್ಮಕ! ಪ್ರತಿ ಬಾರಿ ಕವನ ಬರೆದು ಸಮುದಾಯದಲ್ಲಿ ಪೋಸ್ಟ್ ಮಾಡುವಾಗ ಏನೋ ಒಂದು ತಳಮಳ. ಪರೀಕ್ಷೆಯಲ್ಲಿ ಬರೆದ ವಿಧ್ಯಾರ್ಥಿಯ ಮನಸು, ಪಲಿತಾಂಶಕ್ಕಾಗಿ ಕಾಯುವ ತವಕ. ಒಂದೆರಡು ಅನಿಸಿಕೆಗಳು ಬಂದರು ಸಹ, ಒಂದು ಸಾರ್ಥಕತೆಯ ಉಲ್ಲಾಸ. ಈ ಉಲ್ಲಾಸ ಎಷ್ಟೊಂದು ವಿಶಿಷ್ಟವಾಗಿದೆ, ಈ ಉಲ್ಲಾಸಕ್ಕೆ ಎಷ್ಟೊಂದು ಶಕ್ತಿ ಇದೆ.

ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

ನಾ ಕಂಡಂತೆ ಸಮುದಾಯದಲ್ಲಿ ಹೆಚ್ಚಿನ ಸಧಸ್ಯತ್ವಕ್ಕೆ ಅರ್ಜಿಗಳು ಬರತೊಡಗಿವೆ. ಇಲ್ಲಿ ಕವನಗಳಿಗೆ ಪ್ರೇರಣೆಯೇ ಪುಷ್ಟಿ ನೀಡುವ ಅಮೃತಬಿಂಧು ಆಗಿದೆ. ಪ್ರೇರಣೆ ಅಂದರೆ ಹೀಗೇನಾ? ಕಾಲಿ ಬಾಟಲಿನಲ್ಲಿ ಗಾಳಿಯು ಸಹ ಪೂರ್ತಿ ತುಂಬಿದೆ ಎಂದು ತೋರುವ ರೀತಿನ? ಜಾರಿ ಬಿದ್ದವನಿಗೆ ಕೈಕೊಟ್ಟು ಎಳೆದೆಬ್ಬಿಸುವ ಹಸ್ತಾನ? ಬತ್ತಿ ಹೋದ ಜೀವಕ್ಕೆ ಒಂದು ಮುಗುಳುನಗೆಯ ಕಾಣಿಕೆನಾ? ಒಂದು "ಭಲೇ" ಎನ್ನುವ ಪದ ನೂರು ಜೀವಕಣಗಳಿಗೆ ಉತ್ತೆಜನನಾ? ಈ ಕಣಗಳು ಕ್ರಿಯಾತ್ಮಕತೆಯ ಸಾಗರವಾಗುವುದು ಸರೀನಾ? ಮುಖ ಪರಿಚಯವೇ ಇಲ್ಲದ ಅಪರಿಚಿತರು

ಮೆಚ್ಚುಗೆಯಾಡಿದಾಗ ಅಣು-ಅಣುವು ಪುಟಿಯುವುದು ನ್ಯಾಯಾನ? ಒಂದೇ ಆಕಾಶದ ಕೆಳಗೆ - ಒಬ್ಬನೇ ಚಂದ್ರನನ್ನ ಹಂಚಿಕೊಂಡ ಬೇರೆ ಬೇರೆ ಊರು ಕೇರಿಯ ಧೀಮಂತರ ನಡುವೆ, ಅರಳುತ್ತಿರುವ ನವ-ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

3K ಸಮುದಾಯದ ಮೊದಲ ಹೆಜ್ಜೆ

ಸಮುದಾಯದಲ್ಲಿ ಮೂಡಿ ಬಂದ ಕವನಗಳನ್ನು ವಿಶ್ಲೇಷಿಸುತ್ತ - ಅನುವಾದಗಳ ನಡುವೆ ನನ್ನನ್ನು "ಅಕ್ಕ" ಎಂದು ಕರೆದು ನಾಮಕರಣ ಮಾಡಿದ್ದ ಕ್ವಿಕಿ ಅರುಣ್! ಇದರ ಜೊತೆಗೆ ನನಗೊಂದು ಮೇಲ್ ಸಹ! "ಅಕ್ಕ, ನಿಮ್ಮ ಅನುಮತಿಯಿದ್ದರೆ ನನ್ನನ್ನು ಈ ಸಮುದಾಯಕ್ಕೆ ಮಾಡರೇಟಾರ್ ಆಗಿ ಮಾಡಿ", ಎಂದು. ಇವನು ನನ್ನನ್ನು ಅಕ್ಕ ಎಂದು ಕರೆದ ರೀತಿಗೆ ಅರ್ಧ ಸೋತು (ಸತ್ತು) ಹೋಗಿದ್ದೆ! ಇವನ ಪತ್ರ ಓದಿ ಕುಣಿಯುವಂತಾದರು, ಸುಧಾರಿಸಿಕೊಂಡೆ, ಸಾವರಿಸಿಕೊ೦ಡೆ, ಆಸಕ್ತಿಗೆ ಕೃತಜ್ಞಳಾಗಿ, "ಆದಷ್ಟು ಬೇಗ ತಿಳಿಸುತ್ತೇನೆ" ಎಂದು ಉತ್ತರಿಸಿದೆ. ಇವನು ನನ್ನನ್ನು "ಅಕ್ಕ" ಎಂದು ಏಕೆ ಕರೆದ? ಹೇಗೆ ಕರೆದ? ನನ್ನ ವಯಸ್ಸು ತಿಳಿಯಲು ಸಮುದಾಯದಲ್ಲಿ ನನ್ನ ಭಾವಚಿತ್ರವಂತು ಇನ್ನು ಪ್ರಕಟಿಸಿಲ್ಲ. ಕವನಗಳ ನಡುವಿನ ಮಾತು ಕತೆಯ ಹೊರತು ಇನ್ನ್ಯಾವ ಪರಿಚಯವೂ ಇರಲಿಲ್ಲ, ಬಹುಶ ನನ್ನ ನಡುವಳಿಕೆ ತುಂಬಾ ದೊಡ್ದವಳಹಾಗೆ ಅನಿಸಿಹೊಗಿದೆಯೇ? ಅದೇನೇ ಇರಲಿ, ಅವನಿಟ್ಟ ಹೆಸರು / ಪದ ನನ್ನ ಜೀವಕ್ಕೆ ಅತ್ಯಂತ ಸನಿಹ. ಇದರ ಹಿಂದೆ ನನ್ನ ಅನ೦ತಾನಂತ ನೆನಪುಗಳೇ ಅಡಗಿವೆ.
ಸಮುದಾಯ ಹೀಗೆ ರೂಪುಗೊಳ್ಳುತಿರುವುದು ಸರಿ, ಅದರ ಪರಿಣಾಮಗಳನ್ನು ವಿಂಗಡಿಸುವಂತೆ ಮನಸು ಹೇಳುತಿದೆ. ಮುಂದೇನಾಗುವುದೋ ಎಂದು ಕಾದು ನೋಡುವ ಪ್ರೇಕ್ಷಕರ ವರ್ಗಕ್ಕೆ ನಾನು ಸಹ ಸೇರಿಹೋದೆ. 3K ಸಮುದಾಯದ ಬುನಾದಿಗೆ ಕ್ವಿಕಿಯ ಈ ಮೇಲ್ ಮೊದಲ ಹೆಜ್ಜೆಯೇನೋ?

ಹ...ಹ...ಹ...ಹರಟೆ

ಹರಟೆ ಹೊಡೆಯುವ ಕಾಯಕ ಯಾರಿಗೆ ತಾನೇ ಇಷ್ಟವಾಗದು. ಇದನ್ನು ಎಲ್ಲರಿಗಿಂತ ಚೆನ್ನಾಗಿ ಅರಿತ ನಮ್ಮ ಸಧಸ್ಯ ಹ..ಹ..ಹ..ಹರಟೆ ಎಂದನೇ? ಕ..ಕ..ಕ..ಕಟ್ಟೆ ಎಂದನೇ? ಕವನಗಳ ಸಮುದಾಯದಲ್ಲಿ ಈ ಕಟ್ಟೆಗೇನು ಕೆಲಸ? ಏನ್ ಕೆಲಸ? ನೀವೇ ಹೇಳಿ ಏನ್ ಕೆಲಸ ಅಂತ :-)

1 comment:

  1. ಹಾಯ್ Roo-1 Didi {फिर से वहीं कमेन्ट :P :D}
    {ಇದಕ್ಕೆ ನೀವು ಬಳಸಿರುವ ಚಿತ್ರ ಹೇಳಿ ಮಾಡಿಸಿದ ಹಾಗಿದೆ.}

    ಲೈಫ್ ಅಲ್ಲಿ ಇದುವರೆಗೂ ಒಮ್ಮೆಯೂ ಕೂಡಾ ರಾಗಿ-ಮುದ್ದೆಯನ್ನ ಸವಿಯದ ನನಗೆ, ಅದರ ಪರಿಮಳವನ್ನ ಉಣಬಡಿಸಿಬಿಟ್ರಿ ಃ-)
    ತುಂಬಾ ಚೆನ್ನಾಗಿತ್ತು ರಾಗಿ-ಮುದ್ದೆ ಕವನ
    ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ? part :-)

    ಇದು ನಾನು ಮೊದಲು ಮಾಡ್ಬೇಕು ಅಂತ ಅನ್ಕೊಂಡಿದ್ದ ಕಾಮೆಂಟ್.

    ಆದರೆ, ಮೊದಲನೇ ಸಾರಿ ರಾಗಿ-ಮುದ್ದೆಯನ್ನ ತಿಂದ ಮೇಲೆ ಯಾಕಾದ್ರೂ ನಿಮ್ ಈ ಬರಹವನ್ನ ಓದಿದ್ನೋ ಅಂತಾ ಬೇಸರ ಃ-(
    ನಂಗೆ ರಾಗಿ-ಮುದ್ದೆಯ ಸವಿ ಹಿಡಿಸಲಿಲ್ಲ.. ಬಾಯೆಲ್ಲ ಒಂಥರಾ ಅಂಟಂಟು ಃ-((
    ಬಹುಶಃ ಅದರ ಸವಿಯನ್ನ ಸವಿಯುವ ಭಾಗ್ಯ ನನ್ನ ನಾಲಿಗೆಗೆ ಇಲ್ವೇನೋ..!! :P :D
    Yup.. u r 100% ri8 Roo-1 Didi.. ಃ-)
    ರಾಗಿ ಮುದ್ದೆ ತಿನ್ನುವಂತದಲ್ಲ! :P :D

    ReplyDelete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...