Sunday, November 23, 2014

ಈ ಭಾನುವಾರವೂ - ಕನ್ನಡಕ್ಕಾಗಿ / ಕಂಕಣಕ್ಕಾಗಿ

ಕಂಕಣ : ನಾಡು - ನುಡಿಗಾಗಿ 

ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, "ಕಂಕಣ" ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ್ರಲ್ ಮಾಲ್ ಎದುರು!  
ಉದ್ದೇಶ ಇಷ್ಟೆ : "ಕನ್ನಡದವರೇ,  ಕನ್ನಡ ಮಾತಾಡಿ" ಅ೦ತ ವಿನಮ್ರವಾಗಿ ಫಲಕಗಳನ್ನ ಪ್ರದರ್ಶಿಸುವ ಮೂಲಕ ಕೇಳಿಕೊಳ್ಳೋದು. ಎಂದೂ ಯಾವ ಪ್ರತಿಭಟನೆಗಳಿಗೂ ರೋಡಿಗಿಳಿದವಳಲ್ಲ - ಮುಜುಗರ ಸರಿ - ಆದರೆ ಇದು ಪ್ರತಿಭಟನೆಯೇ ಅಲ್ಲ - ಮನವಿ ಮಾತ್ರ - ಒಂದೇ ಒಂದು ಘೋಷಣೆಯನ್ನೂ ಸಹ ಕೂಗದೆ - ಹೆಮ್ಮೆಯಿಂದ ನಾನು ಕನ್ನಡತಿ ಅಂತ ಸಾರುವ ಒಂದು ಸುವರ್ಣವಕಾಶ, ಬಿಡೋದುಂಟೆ? ಕನ್ನಡಿಗರನ್ನ ಎಬ್ಬಿಸಿ "ಕನ್ನಡ ಮಾತಾಡ್ರಪ್ಪ, ದೇವ್ರುಗಳ"!! ಅಂತ ಕೇಳಿಕೊಳ್ಳುವ ಅಭಿಯಾನ. 

ಈ ಅಭಿಯಾನಕ್ಕೆ ಬೇಕಿದ್ದ ಪೂರ್ವ ತಯಾರಿ ಅಷ್ಟಿಷ್ಟಲ್ಲ. ನಂಗೊತ್ತು ಕಂಕಣ ಬಳಗದ ಕೆಲವು ಸಧಸ್ಯರು ಅತ್ಯಂತ ಹೆಚ್ಚು ಶ್ರಮವಹಿಸಿ ತಯಾರಿ ನಡೆಸಿದ್ರು. ಚಿದಾನಂದ್, ಶ್ರೀಧರ್, ಪ್ರಕಾಶ್, ಭ್ರಮೇಶ್, ರವೀಂದ್ರ .... ಅನೇಕರು. ಕವಿರಾಜ್ ಅವರು ಸಹ ಖುದ್ದು ತಾವೇ ಪ್ರತಿಯೊಂದು ವಿಭಾಗದಲ್ಲೂ ಎಚ್ಚರ ವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 

ಮಾಲ್ ಬಳಿ ಸೇರಿದೆವು, ಗುಂಪುಗಳ ವಿಂಗಡಿಸಿದರು - "ಎಲ್ರೂ ನಿಮ್ಮ height ಪ್ರಕಾರ ನಿಲ್ಲಿ ಅಂದ್ರು", ಹ.ಹ.!  ನನ್ನ ಸ್ಕೂಲ್ PT ಮೇಡಂ ನೆನಪಾದ್ರು! ಎತ್ತರ ಇದ್ದೀನಿ ಅಂತ ಅಲ್ಲೆಲ್ಲೋ ಹಿಂದೆ ಹೋಗಿ ನಿಂತಾಗೆಲ್ಲ, "ಹೇ ನೀನು, ಹೂಂ ನೀನು, ಬಾ .. ಮುಂದೆ ಬಾ, ಯಾವಾಗ್ಲು ಹಿಂದೆ ಹೋಗಿ ನಿಲ್ತೀಯ" ಅಂತ ರೇಗುತಿದ್ದ ನೆನಪಾಯ್ತು.

"ಇದು ನಮ್ಮ ಮೊದಲ ಹೆಜ್ಜೆ - ಯಾರು ನಾಚ್ಕೊಬೇಡಿ - ಹೆಮ್ಮೆಯಿಂದ ಫಲಕ ಹಿಡ್ಕೊಂಡು ನಿಂತ್ಕೊಳ್ಳಿ - ನಡೀರಿ" ಅಂತ ಎಲ್ಲ ತಂಡಗಳಿಗೂ ಹುರಿದುಂಬಿಸಿದ್ದರು ಕವಿರಾಜ್. ಚಪ್ಪಾಳೆಗಳೊಂದಿಗೆ ಅಭಿಯಾನಕ್ಕೆ PLACARD ಹಿಡಿದು ಮುನ್ನಡೆದ ಮೊದಲ ತಂಡ ನಮ್ಮದು/ನನ್ನದು. 
* * * 
ಅದೇನು ಹುಮ್ಮಸ್ಸು - ಅದೆಲ್ಲಿಯ ಸ್ಪೂರ್ತಿ! ಇಂಥ ಒಂದು ಅಭಿಯಾನಕ್ಕೆ ಸಾಮಾನ್ಯ ಜನರು ಸ್ಪಂಧಿಸಿದ್ದು ಹೀಗೆ : 
- ಬೈಕಲ್ಲಿ / ಬಸ್ಸಲ್ಲಿ / ಕಾರಲ್ಲಿ ಹೋಗ್ತಿದ್ದವ್ರು ಕೈ ಬೀಸಿ ಹೋಗ್ತಿದ್ರು 
- ಕೆಲವರು ಫೋಟೋ ಕ್ಲಿಕ್ಕಿಸ್ತಿದ್ದ್ರು / ವಿಡಿಯೋ ಮಾಡ್ಕೊಳ್ತಿದ್ರು  
- ಒಂದು ಮುಗುಳ್ನಗೆಯೊಂದಿಗೆ THUMBS UP ಮಾಡ್ತಿದ್ರು 
- ತಾವಾಗೆ ಖುದ್ದಾಗಿ ಬಂದು "ಬೇಕಿತ್ತು ರೀ ಇದು" ಅಂತ ಹೇಳ್ತಿದ್ರು 
- ಬಸ್ ಡ್ರೈವರ್ಗಳು / ಕಂಡೆಕ್ಟರ್ಗಳು ಮೆಚ್ಚುಗೆ ಸೂಚಿಸುತ್ತಿದ್ರು
- ಇನ್ನು ಸಮಯ, ಉದಯ, ಜ್ಹೀ, ಬೀ, ಕಸ್ತೂರಿ ಸಹ ಅಲ್ಲಿದ್ರು 
* * * 
ಜನಸಾಮಾನ್ಯರು ಖುದ್ದಾಗಿ ನಮ್ಮ ಮಧ್ಯೆ - ನಮ್ಮ ಜೊತೆ ಬಂದು ಫಲಕ ಹಿಡಿದು ದನಿಯಾದದ್ದು ಹೀಗೆ :
* * * 
ಮಾಲ್ ಎದುರಿಗೆ ನಮ್ಮ ಅಭಿಯಾನಕ್ಕೆ ಯಾವುದೇ ತೊಂದರೆ ಆಗದಂತೆ ಟ್ರಾಫಿಕ್ಕನ್ನು ಅದ್ಭುತವಾಗಿ ನಿಭಾಯಿಸುತಿದ್ದ ಈ ಮಹಿಳಾ ಸಿಬ್ಬಂದಿಯವರಿಗೊಂದು ಸಲಾಮು. 
* * * 
ಪೋಲಿಸ್ ಆಫೀಸರ್ಗಳುಸಹ ನಮ್ಮ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದು ಹೀಗೆ:
* * * 
ಇವರು - ಕವಿರಾಜ್ ರ ಪತ್ನಿ ರಾಜೇಶ್ವರಿ - ಕವಿಯವರಂತೆ ಸರಳ, ಸ್ನೇಹಮಯೀ, ಆತ್ಮೀಯ ವ್ಯಕ್ತಿತ್ವ! ಖುಷಿಯಾಯ್ತು ಭೇಟಿ :) ಅವರೊಟ್ಟಿಗೆ ಮುಂದಿನ ಫೆಬ್ರವರಿಯಲ್ಲಿ ಭುವಿಗಿಳಿವ ಪುಟ್ಟ ಜೀವವೂ ಸಹ ಇತ್ತು, ವಿಶೇಷ ! ಈಗಿಂದಲೇ ಅದಕ್ಕೂ ಕಂಕಣ! 
* * *
ದಿನಕರ್ ತೂಗುದೀಪ : ಇವರು ಸಹ "Guest"ಆಗಿ ಬಂದು ದನಿಗೂಡಿಸಿದ್ದು ವಿಶೇಷ
* * *
 ಎಲ್ಲರು ಸೇರಿ ಈ ಫೋಟೋ ತೆಗೆಸಿಕೊಳ್ಳುವಾಗ್ಲು ಒಂದು ಜೈಕಾರ ಆಗಲಿ / ಹಿಪ್ ಹಿಪ್ ಹುರ್ರೇ ಅಂತ ಆಗಲಿ ಏನನ್ನು ಕೂಗುವಂತಿರಲಿಲ್ಲ. ಉದ್ವೇಗ / ಖುಷೀ ಹೇಗೆಲ್ಲ ನಿಯಂತ್ರಿಸಿಕೊಳ್ಳಬೇಕು ನೋಡಿ :)  ....

ಕಡೆಗೆ ಬಂದ ಕಾಫಿ ಮಾತ್ರ - ಸೂಪರ್ - ಬೇಕಿತ್ತು - ಆ ಸಮಯಕ್ಕೆ ಸಿಕ್ಕ ಅಮೃತವದು :
ಎರಡುವರೆ / ಮೂರು ಗಂಟೆಗಳ ಕಾಲ ನಿಂತೇ ಇದ್ದು ಮನೆಗೆ ಬಂದ ಮೇಲೆ ಗೊತ್ತಾಗಿದ್ದು - ಕಾಲು ನೋವು ಅಂತ!! ಆ ನೋವಲ್ಲು ಒಂದು ಧನ್ಯತೆಯ ಭಾವ, ಅದೊಂದು Excellent Feel. 
ಕವಿರಾಜ್ ರವರಿಗೆ  - ಕಂಕಣಕ್ಕೆ ಒಂದು ನಮನ
ಈಗಷ್ಟೇ ಮೊದಲಾಗಿದೆ.... ಇನ್ನೂ ಬಹಳ ಬಾಕಿ ಇದೆ.
* * * 
ಅಂದಹಾಗೆ ಇದು ನನ್ನ ನೆಚ್ಚಿನ ಫೋಟೋ - ಮರೆತಿದ್ದೆ :) 
* * * 

Sunday, October 5, 2014

ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ : ಪಂಜುವಿನಲ್ಲಿ

http://www.panjumagazine.com/?p=6596#comments

ಸ್ಪ್ರಿ೦ಗ್ ಟ್ರೀ ಅಪಾರ್ಟ್ಮೆ೦ಟ್ ರೆಸಿಡೆ೦ಟ್ಸ್ ಅಸೋಸಿಯೇಷನ್ನಿನ ನಿಯಮದ೦ತೆ / ಸರದಿಯ೦ತೆ ಈ ಬಾರಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ೪೦೪ ನೇ ಫ್ಲಾಟಿನ ಶಾ೦ತ ಇನಾಮ್ದಾರ್. ಸರದಿಯ ಪ್ರಕಾರ ಆಯ್ಕೆಯಾಗಿದ್ದರು ಒಲ್ಲದ ಮನಸಿನಿ೦ದಲೇ ಈ ಜವಾಬ್ದಾರಿಯನ್ನು ಒಪ್ಪಿಕೊ೦ಡಿದ್ದಳು. ಆಯ್ಕೆಯಾದ ವಿಷಯ ಮನೆಯಲ್ಲಿ ತಿಳಿಸಿದಾಗ ಯಾರೊಬ್ಬರೂ ಇದನ್ನು ಸ್ವಾಗತಿಸಿರಲಿಲ್ಲ. ಬದಲಿಗೆ ಗೇಲಿ ಮಾಡಿ ತಮಾಷೆ ಮಾಡಿದ್ದರು.
 
ಮು೦ದಿನ ವಾರ ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅ೦ಗವಾಗಿ ಅಸೋಸಿಯೇಷನ್ನಿನ ಸಧಸ್ಯರೆಲ್ಲರೂ ಸೇರಿ ಒ೦ದು ಕಾರ್ಯಕ್ರಮ ಆಯೋಜಿಸಿಕೊ೦ಡಿದ್ದು, ಅದಕ್ಕಾಗಿ ಶಾ೦ತ ಅಪಾರ್ಟ್ಮೆ೦ಟಿನ ಹೆ೦ಗಸಿರಿಗೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಭಾಷಣ ಮಾಡುವ೦ತೆ ನಿರ್ಧಾರವಾಯಿತು. ಮೀಟಿ೦ಗ್ ಮುಗಿಸಿಕೊ೦ಡು ಬ೦ದಾಗಿನಿ೦ದ ಶಾ೦ತಳಿಗೆ ಭಾಷಣದಲ್ಲಿ ಮಾತನಾಡುವುದರ ಬಗ್ಗೆಯೇ ದೊಡ್ಡ ಚಿ೦ತೆಯಾಗಿತ್ತು.  
 
ಇನ್ನು ತನ್ನ ಭಾಷಣವನ್ನು ಬರೆದಿಟ್ಟುಕೊಳ್ಳುವುದೇ ಲೇಸು ಎ೦ದು ನಿರ್ಧರಿಸಿದ್ದಳು. ಅ೦ತೆಯೇ ಮರು ದಿನ ಬೇಗನೆದ್ದು ಮನೆಯ ಕೆಲಸಗಳನ್ನೆಲ್ಲಾ ಮುಗಿಸಿ, ಬೆಳಗಿನ ತಿ೦ಡಿ, ಮಧ್ಯಾಹ್ನದ ಅಡುಗೆ ಎಲ್ಲವೂ ಚಕಚಕನೆ ಮುಗಿಸಿಟ್ಟಳು. ಕಾಫಿ ಬೆರೆಸಿ ಮಾವನವರಿಗೆ ಕೊಡುವಷ್ಟರಲ್ಲಿ ಎ೦ದಿಗಿ೦ತ  ಹತ್ತು ನಿಮಿಷ ತಡವಾಗಿತ್ತು. ಅದಕ್ಕಾಗಿ ಅವರ ತೀಕ್ಷ್ಣ ನೋಟ ಎದುರಿಸಲಾಗದೆ, ಮೆಲು ದನಿಯಲ್ಲಿ ‘ಕಾಫಿ ಇಲ್ಲಿಡ್ಲಾ ಮಾವ’, ಅ೦ತ ಕೇಳಿಕೊ೦ಡು ಟೇಬಲ್ಲಿನ ಮೇಲೆ ಇಟ್ಟುಬ೦ದಳು. ಮನೆಯ ಹಿರಿಯರಾದ ಇವರು ಹೆ೦ಡತಿಯನ್ನು ಬ೦ದೋಬಸ್ತಿನಲ್ಲಿಡಬೇಕು ಎ೦ಬುದರ ಬಗ್ಗೆ ತಮ್ಮ ಮಗನಿಗೆ ಚಾಚು ತಪ್ಪದೆ ಭೋದಿಸಿದ್ದರಿ೦ದ ಶಾ೦ತಳ ಪತಿರಾಯ ಪಿತೃ ವಾಕ್ಯ ಪರಿಪಾಲಕನಾಗಿ ಮೆರೆದಿದ್ದ.
 
ಸ್ನಾನ ಮುಗಿಸಿ ಬ೦ದಿದ್ದ ಪತಿಗೆ ಇಸ್ತ್ರಿ ಮಾಡಿಸಿಟ್ಟ ಬಟ್ಟೆಯನ್ನು ಟೇಬಲ್ ಮೇಲಿಟ್ಟು, ಅಡುಗೆ ಮನೆಯ ಕಡೆ ಓಡಿದಳು ಶಾ೦ತ. ಇನ್ನು ಮಗನಿಗೂ – ಪತಿಗೂ ಡಬ್ಬಿ ಕಟ್ಟುವ ಕೆಲಸ ಬಾಕಿ ಇತ್ತು. ಡೈನಿ೦ಗ್ ಟೇಬಲ್ಲಿನ ಮೇಲೆ ಮಾಡಿಟ್ಟ ಅಡುಗೆ ಪೇರಿಸುವುದು ಸಹ ಬಾಕಿ ಇತ್ತು. ಮನೆಯ ಗ೦ಡಸರು ತಿ೦ಡಿಗೆ೦ದು, ಊಟಕ್ಕೆ೦ದು ಕುಳಿತಾಗ ಅವರೊಡನೆ ಹೆ೦ಗಸರು ಕೂರಬಾರದೆ೦ಬುದು ಆ ಮನೆಯ ನಿಯಮ. ಹೊಸತರಲ್ಲಿ ಎಲ್ಲಾ ನಿಯಮಗಳು ಅಯೋಮಯವಾಗಿ ಕ೦ಡಿತ್ತು. ಪಾಲಿಸದೆ ವಿಧಿಯಿಲ್ಲ ಎ೦ದು ಕೊ೦ಡು, ಎಲ್ಲರ ಬೇಕು ಬೇಡಗಳ ಮಧ್ಯೆ ತನ್ನ ಬದುಕೊ೦ದು ಯಾ೦ತ್ರಿಕವಾಗಿರುವುದರ ಬಗ್ಗೆ ಆಗಾಗ ನೊ೦ದುಕೊಳ್ಳುತ್ತಿದ್ದಳು. ಮನೆಯವರ ಸೇವೆಯಲ್ಲಿ ಕಾಲ ಸವೆಯುತಿದ್ದರು, ತನಗಾಗಿ, ತನ್ನತನಕ್ಕಾಗಿ ಮನಸು ಹ೦ಬಲಿಸುತ್ತಿತ್ತು. ಗ೦ಡನ ಪ್ರೀತಿಯ ಮಾತುಗಳಾಗಲಿ, ಮಾವನ ಅಕ್ಕರೆಯಾಗಲಿ ಎ೦ದಿಗೂ ಅವಳ ಪಾಲಿಗೆ ಸ್ವಪ್ನವೇ. ತಾನು ಅಸೋಸಿಯೇಷನ್ನಿನ ಸಧಸ್ಯೆಯಾದ೦ದಿನಿ೦ದ ಈ ರೀತಿಯ ಆಲೋಚನೆಗಳು ಅತಿಯಾಗಿ ಕಾಡುತಿದ್ದವು. ಕಾಲೇಜಿನ ಟಾಪರ್ಗಳಲ್ಲಿ ಒಬ್ಬಳಾಗಿ, ಎಕನಾಮಿಕ್ಸ್ನಲ್ಲಿ ಉನ್ನತ ಡಿಗ್ರಿ, ಚಿನ್ನದ ಪದಕ ಎಲ್ಲವೂ ತನ್ನದಾಗಿಸಿಕೊ೦ಡರೂ, ಮದುವೆಯ ನ೦ತರ ಸುಖ ಸ೦ಸಾರದ ಕನಸು ಕ೦ಡಿದ್ದಳಷ್ಟೆ ಹೊರತು, ಕಳೆದು ಹೋಗಬಹುದಾದ ಅವಳ ಅಸ್ತಿತ್ವದ ಕುರಿತು ಎ೦ದೂ ಆಲೋಚಿಸಿರಲಿಲ್ಲ.
 
ದಿಢೀರನೆ ಸ್ತ್ರೀ ಸ್ವಾತ೦ತ್ರ್ಯದ ಬಗ್ಗೆ ಮಾತನಾಡ ಬೇಕೆ೦ದಾಗ ಮನಸು ಮುದುಡಿ ಗುಬ್ಬಿ ಗೂಡಿಗೆ ಸೇರಿತ್ತು. ಯಾವುದಕ್ಕೂ ಭಾಷಣ ತಯ್ಯಾರಾಗಬೇಕೆ೦ದು ಕೊ೦ಡು, ಪೇಪರ್ರು ಪೆನ್ನು ಹಿಡಿದು ಬಾಲ್ಕನಿಯಲ್ಲಿ ಬ೦ದು ಕುಳಿತಳು. ಅಪಾರ್ಟ್ಮೆ೦ಟಿನ ಎದುರು ಪುಟ್ಟ ಗುಡಿಸಲೊ೦ದಿತ್ತು. ಅಲ್ಲಿ ಗ೦ಡ ಹೆ೦ಡಿರ ಸ೦ಸಾರವೊ೦ದು ತಳ್ಳುವ ಗಾಡಿಯ ಮೇಲೆ ಇಸ್ತ್ರಿ ಅ೦ಗಡಿ ಇಟ್ಟುಕೊ೦ಡಿದ್ದರು. ಬಾಲ್ಕನಿಯಲ್ಲಿ ಕುಳಿತ ಶಾ೦ತಳ ಗಮನ ಆ ಗುಡಿಸಲ ಕಡೆ ಹರಿದಿತ್ತು. ಆ ಪುಟ್ಟ ಗುಡಿಸಲಿನಲ್ಲಿ ಗ೦ಡ ಹೆ೦ಡಿರ ಜಗಳ ಆಗಾಗ ನಡೆಯುತ್ತಲೆ ಇತ್ತು. ಕುಡಿದು ಬ೦ದ ಗ೦ಡನಿಗೆ, "ಈ ತಪ್ಪಲೆಯಲ್ಲಿ ಮೊಟಕ್ತೀನಿ ನೋಡು" ಅ೦ತ ಹೆ೦ಡತಿ ಜೋರಾಗಿ ಬಯ್ಯೋದು, "ಕ೦ಠ ಪೂರ್ತಿ ಕುಡಿದು ಸಾಯ್ತೀಯ, ಬೆಳಗಾನ ಎದ್ದು ವಾ೦ತಿ ಮಾಡ್ಕತೀಯ, ಅದೇನ೦ತ ಹುಟ್ಟಿದ್ಯೂ ಮೂದೇವಿ" ಅ೦ತ ಅರಚಿದ್ದು, "ರಾತ್ರಿ ಮುದ್ದೆನೇ ಇರೋದು, ತಿನ್ನು ಇಲ್ಲಾ೦ದ್ರೋಗಿ ಸಾಯಿ" ಅ೦ತ ರೇಗೋದು, "ನನ್ ಗ೦ಡನ್ಗೆ ಇಷ್ಟ ಅ೦ತ ಇವತ್ತು ಹುರಳಿಕಾಳ್ ಉಪ್ಸಾರು ಮಾಡಿದೀನಿ" ಅ೦ತ ಯಾರಿಗೋ ಕೂಗಿ ಹೇಳೋದು, ಅಷ್ಟೆಲ್ಲ ಬೈದಾಡಿದ್ದರು ಮರು ದಿನ ಹೆ೦ಡತಿಗೆ೦ದು ಅವಳ ಗ೦ಡ ಅವರೆಕಾಯಿ ಸುಲಿದು ಕೊಡೋದು! ಎಲ್ಲವೂ ನೆನಪಾಗ ತೊಡಗಿತು.
 
ಶಾ೦ತಳಿಗೆ ತನ್ನಲ್ಲಿರದ ಆ ಧೈರ್ಯ, ಸೆಟೆದು ನಿಲ್ಲುವ ಸ್ಥೈರ್ಯ, ಅ೦ಜದೆ ಮಾತನಾಡಬಲ್ಲ ಶಕ್ತಿ ಆ ಹೆಣ್ಣುಮಗಳಿಗಿದೆ ಎ೦ದು ಸಣ್ಣದಾಗಿ ಅನಿಸಲು ಶುರುವಾಯಿತು. ತನಗೆ ಹೇಳಬೇಕಾಗಿರುವುದನ್ನು ಹೇಳಿಯೇ ತೀರುವ ಅವಳ ಜಾಣತನ, ಅನ್ಯಾಯವನ್ನು ಸಹಿಸದೆ ತನ್ನ ಸಿಟ್ಟು ವ್ಯಕ್ತಪಡಿಸುವ ಅವಳ ಮೊ೦ಡಾಟಿಕೆ, ಗ೦ಡನನ್ನು ಬೈಯ್ಯುವ ಅವಳ ಪ್ರೀತಿ ವಿಶೇಷವಾಗಿ ಕಾಡಲು ಶುರುವಾಯಿತು. ಅ೦ತಿ೦ತವನೇ ಆದರು ಆ ಮನೆಯಲ್ಲಿ ಅವನ ಹೆ೦ಡತಿಗೆ ವಾಕ್ ಸ್ವಾತ೦ತ್ರವನ್ನು ಕೊಟ್ಟ ಅವಳ ಗ೦ಡನ ಮೇಲೆ ಗೌರವ ಮೂಡಿ ಬ೦ತು.
 
ಇವರಿಬ್ಬರೂ, ಇವೆಲ್ಲವೂ  ಸ್ವಾ೦ತ೦ತ್ರ್ಯದ ಪ್ರತೀಕದ೦ತೆ ಭಾಸವಾಯಿತು ಶಾ೦ತಳಿಗೆ. ಆ ಪುಟ್ಟ ಗುಡಿಸಲಿನ ದ೦ಪತಿಗಳಿಗೆ ತನ್ನನ್ನೂ ತನ್ನ ಸ೦ಸಾರವನ್ನು ಹೋಲಿಸಿಕೊ೦ಡಳು. ಅವಳ ಮನಸು ಭಾರವಾಗಿ ಕಣ್ತು೦ಬಿ ಬ೦ತು. ಏನೂ ಬರೆದುಕೊಳ್ಳಲಾಗದೆ ದೀರ್ಘವಾಗಿ ಯೋಚಿಸತೊಡಗಿದಳು, ಮತ್ತದೇ ಸ್ತ್ರೀ, ಸ್ವಾತ೦ತ್ರ್ಯ, ಸ್ತ್ರೀ ಸ್ವಾತ೦ತ್ರ್ಯ …….  


Friday, October 3, 2014

Hi Ghalib......

ಈ ಹೊತ್ತಿನಲ್ಲಿ
ನಿನ್ನ ಭೇಟಿ
ಬೇಡವಾಗಿತ್ತು
ಗಾಲಿಬ್....

ಪ್ರೀತಿ, 
ಪ್ರೀತಿಯಲ್ಲ,
ಪ್ರೀತಿಯ ಕವನ ಅದಲ್ಲವೇ ಅಲ್ಲ!!
ಹ ಹ! ಕವನ ಮಾತ್ರ
ಪ್ರೀತಿಯ ಕುರಿತು ಎಂದೆ ....

ನಿನ್ನ ಗಜಲ್ನ
ಅಲೌಕಿಕತೆಯ
ಸದ್ದಿಗೊಮ್ಮೆ
ಒಲವುಂಡ ಪದಗಳೆಲ್ಲ
ತಲೆಕೆಳಗಾದವು....

ವಿನಾಕಾರಣ  
ಕಾಲಡಿಯಲ್ಲಿದ್ದ ಭೂಮಿ 
ನೆತ್ತಿಯ ಮೇಲೆ
ತಂದಿರಿಸಿದ್ದು ನೀನೇ
ಅಬ್ಭಾ! ಹೃದಯ ಭಾರ ....

ನೀನೂ -
ನಿನ್ನ ಗಜಲ್ಗಳ
ಸಹವಾಸವೇ ಬೇಡ
ವಿದಾಯ ನಿನಗೆ
ಮುಂದೆಂದಾದರು
ಸಿಗುವ.....

......... ಇಲ್ಲ,ಆವರಿಸಿಯೇಬಿಟ್ಟೆ!
ಅಮಲು, ಮತ್ತೆ ನಾಳೆ
ಇದೇ ಸಮಯಕ್ಕೆ
ಹೊಸ ಪುಟ
ಹೊಸ ಭೇಟಿ....

ಪಂಜುವಿನಲ್ಲಿ ............

http://www.panjumagazine.com/?p=8071


ಸೌಮ್ಯ : ಅಪ್ಪನ ಕುಡಿತಕ್ಕೆ, ಸಾಲಗಳಿಗೆ ಬಲಿಯಾಗಿ ನಗರದಲ್ಲಿ ಮನೆಕೆಲಸಕ್ಕಿರುವ ೮ ವರುಷದ ಬಾಲಕಿ. 
ರಾಜು : ಹೆತ್ತವರ ಆರನೇ ಕುಡಿ, ವಯಸ್ಸು ೧೧! ತನ್ನೂರ ಬಿಟ್ಟು ನಗರಕ್ಕೆ ಬಂದು ಯಾವುದೋ ಟೀ ಅಂಗಡಿಯಲ್ಲಿ ಕೆಲಸಕ್ಕಿದ್ದಾನೆ. 
ದೀಪ : ತಾನು ಕಲಿಯುತಿದ್ದ ಶಾಲೆಯ ಶಿಕ್ಷಕನಿಂದಲೇ ಲೈಂಗಿಕ ದೌರ್ಜ್ಯನಕ್ಕೊಳಗಾಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆಯುತ್ತಿರುವ ಮುಗುದೆ. 
ರವಿ : ಪರೀಕ್ಷೆಯಲ್ಲಿ ಕಡಿಮೆ ಅಂಕಗಳ ಪಡೆದ ಕಾರಣ ಅಮ್ಮ ಬೈದಳೆ೦ದು, ಸಮಾಜದ ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾದ ೧೪ ವರುಷದ ಬಾಲಕ. 
ಚೈತ್ರ : ಹದಿಮೂರು ವರುಷದ ಬಾಲಕಿ, ಆಗಲೇ ಗರ್ಭಿಣಿ. 
ಚಿರಂತ್ : ತನ್ನ ಹೆತ್ತವರಿಬ್ಬರೂ ಎಂಟಂಕಿ ಸಂಬಳ ತರುವ ಮೇಧಾವಿಗಳು. ಮಗನಿಗಾಗಿ ಅವರ ಬಳಿ ಸಮಯವಿಲ್ಲ. ತನ್ನ ೧೨ನೇ ವಯಸ್ಸಿನಲ್ಲಿ ಸಿಗರೇಟು, ಗಾಂಜಾ ಸೇವನೆ! ಈಗ ಮಾನಸಿಕ ಅಸ್ವಸ್ಥ. 
ಮೈನ : ಮನೆಗೆ ಬರುತಿದ್ದ ಅಪ್ಪನ ಸ್ನೇಹಿತನಿಂದಲೇ ದೌರ್ಜ್ಯನಕ್ಕೊಳಗಾಗಿ ಖಿನ್ನತೆಯಿಂದ ಬಳಲುತ್ತಿರುವ ಹೆಣ್ಣುಕೂಸು. 
ಸುಂದರ್ : ಅವನ ಊರು ಕೇರಿ ತಿಳಿಯದು! ಹಸಿವಿನಿಂದ ಬಳಲಿ, ಕಂಗಾಲಾಗಿ ಕಡೆಗೆ ಅಂಗಡಿಯವನನ್ನೇ ಚಾಕುವಿನಿಂದ ಇರಿದು ಕೊಂದ ಅಪ್ರಾಪ್ತ
ಲಿಲ್ಲಿ / ಸಮೀರ : ಮೈನೆರೆಯುವ ಮುನ್ನವೇ ಹೊರ ದೇಶಕ್ಕೆ ಮಾರಾಟವಾದ ಹೆಣ್ಣು ಮಕ್ಕಳು. 
ಆಶ್ರಮ : ಆರರಿಂದ ಹದಿನಾರು ವಯಸ್ಸಿನ ಮಕ್ಕಳನ್ನು ಸಾಕುತಿದ್ದ ಅನಾಥಾಶ್ರಮದ ಮುಖ್ಯಸ್ಥನಿಂದಲೇ ಮಕ್ಕಳಿಗೆ ಕಿರುಕುಳ, ಹಿಂಸೆ.  
ಚಂದ್ರು : ಎಲ್ಲದರಲ್ಲೂ ನಂಬರ್ ೧ ಇರಲೇಬೇಕೆಂದು ಅಪ್ಪ ಅಮ್ಮನ ಒತ್ತಡ, ಆಟ-ಪಾಟ-ನೃತ್ಯ-ಸಂಗೀತ-ಕಲೆ ಎಲ್ಲೆದರಲ್ಲೂ ಮುಂದಿರಬೇಕು. ಅಪ್ಪ ಅಮ್ಮನ ಕನಸುಗಳಿಗೆ ಇವನ ಕನಸುಗಳು / ಆಸೆಗಳೆಲ್ಲವು ಬಲಿ. 
ಬಣ್ಣ ಬಣ್ಣದ ಚಿಟ್ಟೆಗಳು
ಕಲ್ಪನೆಗಳ ರೆಕ್ಕೆಗಳು
ಮುದುಡಿವೆ
ಕಡೆದಿವೆ,
ಇನ್ನೆಂದೂ ಹಾರಲಾರವು…..
 
ರಂಗು ರಂಗಿನ ಬಿಲ್ಲು
ಗಗನವೆಲ್ಲಾ ಆವರಿಸಿದ್ದರೂ
ಬಣ್ಣಗಳೆಲ್ಲ  ಕಮರಿವೆ,
ಕದಡಿವೆ
ಎಲ್ಲವೂ ಅಸ್ಪಷ್ಟ….. 
ಇವು ಉದಾಹರಣೆ ಮಾತ್ರವಲ್ಲ! ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ದೌರ್ಜ್ಯನಕ್ಕೊಳಗಾಗುತಿರುವ ನಮ್ಮ ಸಮಾಜದ ಮುಗ್ಧ ಪೀಳಿಗೆಯ ಒಂದು ಸಣ್ಣ ಝಲಕ್. ಆಗಷ್ಟೇ ಚಿಗುರಬೇಕಿದ್ದ ಪುಟ್ಟ ಹೃದಯಗಳು, ಆಗಲೇ ಜೀವನದ ಅನೇಕ ಕಷ್ಟಗಳನ್ನು ಎದುರಿಸಿ ತಮ್ಮ ಬಾಲ್ಯವನ್ನು ಕಳೆದುಕೊಂಡ ಅಮಾಯಕ ಮನಸುಗಳ ವ್ಯಥೆ. 
ಮಕ್ಕಳಿಗೆ ಆಶ್ರಯವಾಗಿ ನೆರವಾಗಿ ನಿಂತ ಸಮಾಜ ಒಂದೆಡೆಯಾದರೆ, ಅವರನ್ನು ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ದೂಡುತಿರುವ ವರ್ಗ ಮತ್ತೊಂದೆಡೆ. ಅಷ್ಟಕ್ಕೂ ಆ ವರ್ಗದಲ್ಲಿರುವ ಜನರು ಸಹ ನಾವೇ ತಾನೆ? ಮಕ್ಕಳ ಮನಸ್ಥಿತಿ ಅರಿಯದಷ್ಟು ಮೌಢ್ಯ, ಮನುಷ್ಯರೆಂಬುದನ್ನೇ ಮರೆಸಿ, ಮೌಲ್ಯಗಳೆಲ್ಲ ಮಾಯವಾಗಿಸಬಲ್ಲ ಕ್ರೌರ್ಯ!!  ಮುಗ್ಧ ಸ್ವಭಾವಕ್ಕೆ ಸ್ಪಂದಿಸಲಾರದ ಮನಸುಗಳೇ ಅವು?

ಆದುನಿಕತೆಯ ಪ್ರಭಾವ! ಎಲ್ಲರನ್ನೂ ಓಡಿಸುತ್ತಿದೆ, ಬದುಕಲು ಸಮಯವೇ ಇಲ್ಲವೇನೋ ಎಂಬಂತೆ ದೌಡಾಯಿಸುತ್ತಿದೆ! ಆ ಬಾಲ್ಯ ಇನ್ನೆಲ್ಲಿ? ಎಲ್ಲವೂ ಕಳೆದು ಹೋಗುತ್ತಿದೆ! ನಾ ಮುಂದು, ತಾ ಮುಂದು ಎನ್ನುವ  ಹಪ-ಹಪಿಯಲ್ಲಿ ನೈಜತೆ ಮರೆ. ಇನ್ನು ಟಿವಿ, ಮೊಬೈಲ್, ಇಂಟರ್ ನೆಟ್ ಬಳಕೆ ಬೇಕಾಗಿರುವುದರ ಜೊತೆ ಬೇಡವಾಗಿರುವುದನ್ನೇ ಹೆಚ್ಚಾಗಿ ಮಕ್ಕಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ. ತಮ್ಮ ವಯಸ್ಸಿಗೆ ಮೀರಿದ  ಬೆಳವಣಿಗೆ, ನಡುವಳಿಕೆ ಹಾಗು ಚಿಂತನೆ.  
ಪುಟ್ಟ ಮಕ್ಕಳಿಗೂ ಸಹ ಗೊತ್ತು :
ಕಾಗದದ ದೋಣಿ – ದೋಣಿಯಲ್ಲ
ಬೀಜ ನುಂಗಿದರೆ – ಮರವಾಗೋಲ್ಲ
ನವಿಲು ಗರಿಯಿಂದ – ಪಾಸಾಗೋಲ್ಲ
ಆಕಾಶದ ನೀಲಿ – ಬಣ್ಣವಲ್ಲ
ಚಿಂದಿರನ ಬಿಂಬ – ಚಿತ್ರವಲ್ಲ
ಸೂರ್ಯನ ಬಳಿ – ಲಾಂದ್ರವಿಲ್ಲ
"ಈ"ಎಂದರೆ ಈಶನೊಬ್ಬನೇ ಅಲ್ಲ…. ಎಂದು 
ಈ ಸ್ಥಿತಿಗತಿಗಳಿಗೆ ಕಾರಣಗಳು ಒಂದೇ – ಎರಡೆ! ನಮ್ಮಿ೦ದಾದರು ಏನು ಮಾಡಲು ಸಾಧ್ಯ? ಬೆಂಬಲವಾಗಿ, ಸಹಾಯವಾಗಿ ನಾವಿದ್ದೇವೆಯೇ? ನನ್ನದೂ ಸಹ ಕೆಲವು ಪ್ರಶ್ನೆಗಳಿವೆ, ಆತಂಕಗಳಿವೆ….  
ಮಕ್ಕಳ ಮೂಲಕ ತಮ್ಮ ಆಸೆಗಳನ್ನು ಪ್ರತಿಷ್ಠೆ ಘನತೆಗಳನ್ನು ಮೆರೆಯುವ ತಂದೆ ತಾಯಂದಿರು ಬದಲಾಗುವುದು ಎಂದು? ಮಕ್ಕಳಿಗೆ ಮುನ್ನುಗ್ಗುವ, ಗೆಲ್ಲುವ ಮಾರ್ಗ ಒಂದಿದ್ದರೆ ಸಾಕೆ? ಅವರಿಗೆ ಸೋಲನ್ನು ಎದುರಿಸುವ ಬಗ್ಗೆ ಹೇಳಿಕೊಡುವುದು ಅತ್ಯಗತ್ಯ. ಗೆದ್ದಾಗ ಅವರೊಟ್ಟಿಗಿರುವುದ ಸಹಜ ಸರಿ, ಸೋತಾಗಲೇ ಅಲ್ಲವೇ  ಮಕ್ಕಳಿಗೆ ಹೆತ್ತವರ ಅವಶ್ಯಕತೆ ಹೆಚ್ಚು. ಮುದ್ದು, ಅಪ್ಪುಗೆ, ಸ್ಪರ್ಶ ಎಲ್ಲವೂ ಮಕ್ಕಳ  ಪಾಲಿನ ಹರುಷ! ಅವರಿಗೆ ಸಲ್ಲಬೇಕಾದಷ್ಟು ಸಲ್ಲಿರುವುದೆ? 
ಹೋಲಿಕೆ! ಒತ್ತಡವೇರಿಸಿ ಕೀಳರಿಮೆ ಮೂಡಿಸಬಲ್ಲ ಅಸ್ತ್ರ. ಕುಗ್ಗಿಹೋಗುವ ಮನಸುಗಳಿಗೆ ಬಾರುಕೋಲಿನ ಪೆಟ್ಟು. ರೆಕ್ಕೆಗಳನ್ನ ಕಟ್ಟಿಹಾಕದೆ ಹಾರಲು ಬಿಟ್ಟರಲ್ಲವೇ ಸ್ವಾವಲಂಬಿಗಳಾಗಲು ಸಾಧ್ಯ! ನಡೆಯಬೇಕು, ನಡೆಸಬೇಕು, ಬೀಳಬೇಕು, ಏಳಬೇಕು, ಪೆಟ್ಟಾಗಬೇಕು, ಕಲೆ ನಿಲ್ಲಬೇಕು, ಪಾಠ ಕಲಿಯಬೇಕು. ಅವರದ್ದೇ ಸ್ವಂತಿಕೆಯನ್ನು ಕಟ್ಟಿಕೊಡಲು ನೆರವಾಗಬೇಕಾದವರು ನಾವು. 
ಬೇಕೆಂದರೂ ಬೇಡವೆಂದರೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಇಂದಿನ ಅನಿವಾರ್ಯತೆ / ಅವಶ್ಯಕತೆ. ಕೆಟ್ಟ ದೃಷ್ಟಿಗಳ ಸೂಕ್ಷ್ಮತೆಯ ಅರಿವು ಸಣ್ಣ ವಯಸ್ಸಿನಲ್ಲೇ ಮೂಡಿಸದಿದ್ದರೆ ಬಲಿಪಷುಗಳಾಗುವುದು ಈ ಹೂ ಹೃದಯದ ಎಳೆ ಚಿಗುರುಗಳು. ಮುಕ್ತವಾಗಿ ಚರ್ಚಿಸದಿದ್ದರು, ಮುಜುಗರ ಮುರಿದು ಹೆತ್ತವರು ಮಕ್ಕಳಿಗೆ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಅವಶ್ಯಕತೆಯಿದೆ.  
ಇನ್ನು ಮಕ್ಕಳ ಮುಗ್ಧ ಪ್ರಶ್ನೆಗಳಿಗೆ ಕಡಿವಾಣ! ಮುಕ್ತವಾಗಿ ಪ್ರಶ್ನಿಸುವ ಅಧಿಕಾರ ಅವರಿಗಿಲ್ಲವೇಕೆ? ಪ್ರಷ್ನಿಸಿದರಲ್ಲವೆ ಸೃಜನಶೀಲತೆಗೆ, ತಮ್ಮಲ್ಲಿ ಅಡಗಿರುವ ಕ್ರಿಯೇಟಿವಿಟಿಯ ಮೊಳಕೆಗಳಿಗೆ ನೀರುಣಿಸಲು ಸಾಧ್ಯ! ಪ್ರಶ್ನಿಸುವ ಹಕ್ಕು, ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ, ಅದನ್ನು ಗೌರವಿಸುವ ಪದ್ಧತಿ ಮನೆಯಿಂದಲೇ ಮೊದಲಾಗಬೇಕು. ತಮಗಾಗುವ ಅನ್ಯಾಯವನ್ನು ಸಹಿಸುವುದು ಸರಿಯಲ್ಲ, ಇಂದಿಗೂ ಸಹ – ಮುಂದೆಯೂ ಸಹ. ಉತ್ತರಗಳು ಬೇಕೆಂದಾದರು, ಸಿಗದೇ ಹೋದರು ಪ್ರಶ್ನಿಸಲೇ ಬೇಕು. ಸಹನೆಯ ಇತಿಮಿತಿಗಳನ್ನು ಜೀವನವೇ ಕಲಿಸುತ್ತದೆ, ಉಳಿದಂತೆ ಮನೋಬಲ ಹೆಚ್ಚಿಸುವುದು ನಮ್ಮ ಕರ್ತವ್ಯ. 
ನಮಗೆ ದೊರೆಯದಿರುವುದು ನಮ್ಮ ಮಕ್ಕಳಿಗಾದರು ಸಿಗಲೆಂದು ಬಯಸುವ ಪರಿ, ಮಕ್ಕಳಲ್ಲಿ ವಸ್ತುಗಳ ಮೌಲ್ಯತೆ ಕುಗ್ಗಿಸುತ್ತಿದೆ. ತಮಗೆ ಬೇಕಾದನ್ನು ಪಡೆಯಲು ಅವರು ಕಷ್ಟವೇ ಪಡಬೇಕಿಲ್ಲ, ಎಲ್ಲವೂ ಸುಲಭವಾಗಿ ದೊರೆಯುತ್ತಿದೆ! ತುಡಿತ – excitement ಕ್ಷಣಾರ್ಧದಲ್ಲಿ ಮಾಯ!! ಬಯಸಿದ್ದನ್ನು ಪಡೆಯಬೇಕು ಎನ್ನುವುದಕ್ಕಿಂತ ಅದನ್ನು ಗಳಿಸಿಕೊಳ್ಳೊಬೇಕು ಎನ್ನುವ ಜ್ಞಾನೋದಯವೇ ಸೂಕ್ತ.   
ಮಕ್ಕಳಿಗಾಗಿ, ಅವರ ರಕ್ಷಣೆಗಾಗಿ ಹೆಲ್ಫ್ ಲೈನ್ ಗಳು / ಎನ್ ಜಿ ಓಗಳು ಪ್ರಯತ್ನಿಸುತ್ತಿವೆ. ಶಾಲೆಯಲ್ಲಿ, ಮನೆಯಲ್ಲಿ ಸಹಾಯವಾಣಿಗಳ / ಫೋನ್ ನಂಬರ್ ಗಳನ್ನು ಬಾಯಿಪಾಟ ಮಾಡಿಸುವುದು ಅತ್ಯವಶ್ಯಕ. 
ಮಕ್ಕಳ ಮನೋವಿಕಾಸ, ಪರಿಪಕ್ವತೆ, ವ್ಯಕ್ತಿ ವಿಕಸನದ ಪ್ರೇರಣೆ / ಪ್ರಚೋದನೆ ನಾವುಗಳೇ.ನಿಲ್ಲದೇ ಸಾಗುತಿರಲಿ ನಮ್ಮ ಪ್ರಯತ್ನ ಮುದ್ದು ಕಂದಮ್ಮರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ, ದೌರ್ಜನ್ಯಕ್ಕೆ ಆಹುತಿಯಾಗದಂತೆ ರಕ್ಷಿಸುವುದರಲಿ, ಆತ್ಮವಿಶ್ವಾಸ  ತುಂಬುವುದರಲ್ಲಿ. 

Thursday, April 24, 2014

ಮಿತಿ


ಭಾಗ (೧) : ಪ್ರಕಾಶ್ ಹೆಗಡೆಯವರ "ಬೇಲಿ" http://ittigecement.blogspot.in/2014/04/blog-post.html
ಭಾಗ (೨) :  ದಿನಕರ್ ಮೋಗೆರರವರ "ದಣಪೆhttp://dinakarmoger.blogspot.in/2014/04/blog-post_14.html  
ಭಾಗ (೩) : ಬಾಲು ಸರ್ ರವರ "ಎಲ್ಲೆಯ ಮಿಂಚು" http://nimmolagobba.blogspot.in/2014/04/blog-post_1912.html
ಭಾಗ (೪) :  "ಮಿತಿ" ಎಂದು ಮುಂದುವರೆಸುವ ನನ್ನ ಪುಟ್ಟ ಪ್ರಯತ್ನ: 


ಅಲ್ಲಿಂದ ಮನೆಯ ಹಾದಿ ಹಿಡಿದು ಹೇಗೆ ಬಂದೆನೋ! ಬಂದೊಡನೆ ಏನೊಂದು ಭಾವವಿಲ್ಲದೆ ಮೂಖಿಯಂತೆ ಕುಳಿತುಬಿಟ್ಟೆ. ಫ್ಯಾನಿನ ಗಾಳಿ ಜೋರಾಗಿ ಬೀಸುತಿದ್ದರೂ ಬೆವರುತ್ತಿದ್ದೆ. ನನ್ನ ಬಗ್ಗೆ ನನಗೆ ನಾಚಿಕೆ, ಕೀಳರಿಮೆ. ಪತಿಯ ಪ್ರಾಮಾಣಿಕತೆ  ಆ ಘಳಿಗೆಯನ್ನು  ಎಚ್ಚರಿಸಿತ್ತು. ಅವರ ನಿಷ್ಕಲ್ಮಷ ಪ್ರೀತಿಗೆ ಎಷ್ಟೊಂದು ಶಕ್ತಿಯಿದೆ ಎಂದು ಗ್ರಹಿಸಿರಲಿಲ್ಲ. ನಾನು ಮಾರುಹೋದೆ!

ನವಿರಾದ ಭಾವಗಳು 
ಹಸೆಮಣೆಯ ಕನಸಂತೆ 
ಮದುಮಗನ ಮುಗುಳ್ನಗೆ 
ಮನಸದುವೆ ಸೋತಂತೆ 
ನವ-ನವೀನ ಬಯಕೆಗಳು 
ಅವಕಿಲ್ಲ ಮಿತಿಯಂತೆ!

ಅಲ್ಲಿಯ ತನಕ ಆ ನನ್ನ ಗೆಳೆಯನಿಗಾಗಿ  ಹಂಬಲಿಸಿದ್ದೆ, ಮನಸಿನಲ್ಲೇ ಮೋಹಿಸಿದ್ದೆ, ಎಲ್ಲೆಲ್ಲೂ ಅವನೇ ಆವರಿಸಿಕೊಂಡಿದ್ದ! ನನಗಾದರೂ ಯಾವ ಮಂಕು ಬಡಿದಿತ್ತೊ? ಆ ಸಮಯದಲ್ಲಿ ಇವರು ಫೋನ್ ಮಾಡದೆ ಇದ್ದಿದ್ದರೆ! ಅಬ್ಭಾ..! ಊಹೆಯೂ ಸಹ ತಲೆ ತಗ್ಗಿಸುವಂತೆ ಮಾಡಿದೆ. 

ಅದೆಷ್ಟು ಹೊತ್ತು ಹಾಗೆ ಶವದಂತೆ ಕುಳಿತಿದ್ದೆನೋ, ಪಕ್ಕದ ಮನೆಯ ಚಿಂಟು ನಮ್ಮ ಮನೆಯ ಬಾಗಿಲು ಬಡಿದಾಗಲೆ ಎಚ್ಚರವಾಗಿದ್ದು. ಅವನನ್ನ ನೋಡಿದೊಡನೆ, ತವರಿನಲ್ಲಿರುವ ನನ್ನ ಮಗಳ ನೆನಪಾಯ್ತು, ದುಖ-ಅಳು ಇಮ್ಮಡಿಯಾಗಿ ಇನ್ನಷ್ಟು ಬಿಕ್ಕಳಿಸಿದೆ. ಇನ್ನಷ್ಟು ಮರುಗಿ ಹೋದೆ. 

ಆ ಕ್ಷಣದಲ್ಲಿ ನನ್ನ ಗಂಡನ ತೋಳ ತೆಕ್ಕೆ ಬೇಕೆನಿಸಿತ್ತು. ಅಂದಿನವರೆಗೂ ಅವರ ನಿಷ್ಕಲ್ಮಷ ಪ್ರೀತಿಯ, ಔದಾರ್ಯದ, ಅಪ್ಪುಗೆಯ ಮಹತ್ವ ನನ್ನ ಅರಿವಿಗೆ ಇರದೇ ಹೋದದ್ದು ವಿಪರ್ಯಾಸ. ನಮ್ಮ ಮಗುವಿನ  ಹೆರಿಗೆಯ ಸಮಯ, ಪ್ರಸವ ವೇದನೆಯ ಜೊತೆ ನನ್ನ ಜೀವ ಉಳಿಯುವುದೂ ಕ್ಲಿಷ್ಟವೇ ಆಗಿದ್ದ ಸಮಯ. ನನಗಾಗಿ, ನಮ್ಮ ಮಗುವಿಗಾಗಿ ಗುರುರಾಯರಲ್ಲಿ ಉರುಳು ಸೇವೆ ಮಾಡುವೆನೆಂದು ಹರಕೆ ಹೊತ್ತಿದ್ದರು. ಆಸ್ಪತ್ರೆಯಲ್ಲಿ ಇದ್ದ ಮೇರಿ ಮಾತಾಳ ಪ್ರತಿಮೆಯ ಮುಂದೆ 101 ಮೊಂಬತ್ತಿ ಬೆಳಗುವುದಾಗಿ ಬೇಡಿಕೊಂಡಿದ್ದರು. ನಾ ತಾಯಾಗಿ ಸಂಭ್ರಮಿಸಿದ್ದಕ್ಕಿಂತ ಹೆಚ್ಚಾಗಿ ಅವರು ತಂದೆಯಾಗಿ - ನನ್ನ ಪತಿಯಾಗಿ ಸಂಭ್ರಮಿಸಿದ್ದರು. ಎಲ್ಲವನ್ನೂ ನಾ ಹೇಗೆ ಮರೆತುಬಿಟ್ಟೆ? ಆ ಮನೆ - ಮನ ಒಡೆಯುವ ಕಾಯಕಕ್ಕೆ ಇವು ನೆನಪು ಬಾರದೆ? 

ನನ್ನ ತವರು ಮನೆಯ ನೆನಪೂ ಸಹ ಆಗುತ್ತಿದೆ! ಅಪ್ಪ ಅಮ್ಮನಲ್ಲಿ ಅಷ್ಟಾಗಿ ಹೊಂದಾಣಿಕೆ ಇರಲಿಲ್ಲ ಹೌದು. ಆದರು ಅವರು ಒಬ್ಬರಿಗಾಗಿ ಒಬ್ಬರು ಬಾಳಿದ್ದರು, ಬದುಕಿದ್ದರು. ಯಾರೊಬ್ಬರು ಮನೆಯಲ್ಲಿ ಇಲ್ಲದಿದ್ದರೂ ಒಬ್ಬರನ್ನೊಬ್ಬರು ಅತಿಯಾಗಿ ಮಿಸ್ ಮಾಡಿಕೊಳ್ಳುತಿದ್ದರು, ಏನನ್ನೋ ಕಳೆದುಕೊಂಡವರಂತೆ ಆಡುತಿದ್ದರು. ಪ್ರೀತಿ ಆಮೇಲೆ, ಜಗಳವಾಡಲೂ ಸಹ ನಿಮ್ಮಮ್ಮ ಇಲ್ಲವಲ್ಲ ಅಂತ ಹೇಳುತಿದ್ದ ಅಪ್ಪನ ಮಾತು ಈಗ ನೆನಪಾಗುತ್ತಿದೆ. ಅಪ್ಪನಿಗಾಗಿ ಅಮ್ಮ ಅನುಸರಿಸಿಕೊಂಡು ಹೋಗುತಿದ್ದ ಸಹನೆಯ ರೀತಿ ನೆನಪಾಗುತ್ತಿದೆ. ಇವರ ಸಂಸ್ಕಾರವೇ ಅಲ್ಲವೇ ನನಗೆ. ಯಾಕೋ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ. 

ಅಷ್ಟಕ್ಕೂ ನನ್ನ ಸಂಸಾರವನ್ನು ಹೋಲಿಸಿಕೊಂಡರೆ, ನಾನೆಷ್ಟು ಪುಣ್ಯವಂತೆ! ಎಂದಾದರೊಮ್ಮೆ ಅಪ್ಪಿ ತಪ್ಪಿ ಜೋರಾಗಿ ಗದರಿದರು, "ತಪ್ಪಾಯ್ತು ಕಣೆ" ಅಂತ ಗೋಗರಿಯುತ್ತಿದ್ದ ನನ್ನ ಪತಿಯ ಅಗಾಧ ಪ್ರೀತಿ ನಾನೇಕೆ ತಿಳಿಯದೆಹೋದೆ? ಹಣ ಖರ್ಚು ಮಾಡುವ ವಿಷಯದಲ್ಲೂ ಎಂದೂ ಸಾಕೆನ್ನಲಿಲ್ಲ. ದೇವರ ಕರುಣೆಯಿಂದ ಮಾಡಿದಂತ ಸಂಸಾರ ನನ್ನದು. ನಮ್ಮ ಜೋಡಿಯನ್ನು, ಸಂಸಾರವನ್ನು ನೋಡುತಿದ್ದ ನಮ್ಮ ಸಂಬಂಧಿಕರು  "ನಿಮ್ಮ ಜೋಡಿ ಹೀಗೆ ನೂರ್ ಕಾಲ ಇರಲಿ" ಅಂತ ಹರಸಿದ್ದುಂಟು, ಸ್ನೇಹಿತೆಯರು ಹೊಟ್ಟೆಕಿಚ್ಚು ಪಟ್ಟಿದ್ದುಂಟು. ಎಲ್ಲ ಸುಗಮವಾಗಿ ಸರಾಗವಾಗಿ ನಡೆಯುವಾಗ ಈ ಹುಚ್ಚಾಟ ನನಗೆ ಬೇಕಿತ್ತೆ? ಈ ಸ್ವಚ್ಚಂದ - ಚೇಷ್ಟೆ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಲು ಹೊರಟಿತ್ತು.
ಸರಿ-ತಪ್ಪುಗಳ ಸೆರೆ 
ಬಲಿಯಾದ ಅಸ್ತಿತ್ವ 
ಬದಲಾದ ಸಂಬಂಧ 
ಬರಿದಾದ ವ್ಯಕ್ತಿತ್ವ 
ಸೆಲೆ, ಸಂಕೋಲೆ 
ಬೇಕಿತ್ತು ವಯಸ್ಸಿಗೆ, ಮನಸಿಗೆ!

ಯಾಕೋ ಎಲ್ಲವನ್ನು ಅವರ ಬಳಿ ಹೇಳಿಕೊಳ್ಳಬೇಕೆನಿಸಿದೆ. ಅವರಲ್ಲಿ ಕ್ಷಮೆ ಕೇಳಬೇಕು. ಈ ಪಾಪ ಪ್ರಜ್ಞೆಯಿಂದ ಹೊರಬರಬೇಕು. ಆ ದೇವರಿಗಿಂತ ಎತ್ತರವಾಗಿ ಕಾಣ್ತಿದ್ದಾರೆ ಅವರು. ನನ್ನ ಮಾತು ಆಲಿಸ್ತಾರೆ, ಹಾಂ ಆಲಿಸ್ತಾರೆ, ನಂಗೊತ್ತು,  ಅವರದು ದೊಡ್ಡ ಮನಸು, ನನ್ನ ಕ್ಷಮಿಸ್ತಾರೆ ಸಹ. ದೇವರ ದೀಪ ಹಚ್ಚಿದೆ, ಆ ದೀಪಗಳಿಂದ ಹೊಮ್ಮುತಿದ್ದ ಬೆಳಕು ಹೊಸದಾಗಿ ಪ್ರಕಾಶಿಸುತ್ತಿದೆ, ಎಲ್ಲವೂ ಮತ್ತೊಮ್ಮೆ ಹೊಸದಾಗಿ ಶುರು ಮಾಡಬೇಕು. 

ಹೀಗಂದುಕೊಳ್ಳುವಾಗಲೇ, ಮೊಬೈಲಿಗೆ ಅವರ ಮೆಸೇಜ್, "Have Your Dinner Chinnu, I Will Be Late Tonight".....  ಆ ಮೊಬೈಲಿಗೊಂದು ಮುತ್ತಿಟ್ಟೆ. ಅವರಿಗಾಗಿ ಕಾಯುತ್ತ ಸೋಫಾದ ಮೇಲೆ ಕುಳಿತಿದ್ದವಳು ಹಾಗೇ ಮಲಗಿಬಿಟ್ಟೆ. 

ಕಣ್ಣು ಬಿಟ್ಟಾಗ ಬೆಳಗಿನ ಐದು ಗಂಟೆ! ನನ್ನ ತಲೆಯ ಕೆಳಗೆ ದಿಂಬು? ಅವರು ಆಗಲೇ ಬಂದಾಗಿದೆ! ರಾತ್ರಿಯ ಯಾವ ಹೊತ್ತಿನಲ್ಲಿ ಬಂದರೋ, ರೂಮಿನ ಕಡೆ ನಡೆದೆ. ಅವರನ್ನೊಮ್ಮೆ ಅಪ್ಪಿಕೊಳ್ಳಬೇಕಿತ್ತು. ಮನಸಾರೆ ಅತ್ತು ಎಲ್ಲವನ್ನು ಹೇಳಬೇಕಿತ್ತು.  ನನ್ನ ಮನಸಿನ ಹೊರೆ ಇಳಿಸಿಕೊಳ್ಳಬೇಕಿತ್ತು. ಗಾಢ ನಿದ್ರೆಯಲ್ಲಿದ್ದಾರೆ, ಹೇಗೆ ಎಬ್ಬಿಸೋದು...ಇನ್ನಷ್ಟು  ಮಲಗಲಿ.  

ಅಡುಗೆ ಮನೆಯ ಕಿಟಕಿಯಿಂದ ಇಣುಕಿದ ಸೂರ್ಯನ ಕಿರಣ ಈ ದಿನ ಹೊಸ ಬದುಕನ್ನು ಕಟ್ಟಿ ಕೊಟ್ಟಂತೆ ಭಾಸವಾಗಿದೆ. ಇನ್ನು ಇವರು ಮಲಗೇ ಇದ್ದಾರೆ ಎಂದುಕೊಂಡು ಬಂದೆ, ಅರೆ ಇದೇನಿದು ಇಷ್ಟು ಬೇಗ ರೆಡಿ ಆಗ್ತಿದ್ದಾರೆ....., "ರೀ ನಿಮ್ಮ ಹತ್ರ ಮಾತಾಡಬೇಕಿತ್ತು, " ಎನ್ನುವಷ್ಟರಲ್ಲಿ, "ಚಿನ್ನು ನಾ ಆಫೀಸಿಗೆ ಹೊರಡಬೇಕು, ತುಂಬಾ ಅರ್ಜೆಂಟ್ ಕೆಲಸವಿದೆ ಬಂದು ಮಾತಾಡ್ತೀನಿ" ಅಂತ ಹೇಳಿ, ತಿಂಡಿಯೂ ತಿನ್ನದೇ ತಮ್ಮ ಲ್ಯಾಪ್-ಟಾಪ್ ಬ್ಯಾಗ್ ಹಿಡಿದು ಹೊರಟೇ ಬಿಟ್ಟರು. ಇರಲಿ, ಸಂಜೆ ಬಂದೆ  ಬರ್ತಾರೆ ಎಲ್ಲಿಗೆ ಹೋಗ್ತಾರೆ ಅಂದುಕೊಂಡು ಅವರಿಗೆ ಬೀಳ್ಕೊಟ್ಟೆ. 

ಡೈನಿಂಗ್ ಟೇಬಲ್ಲಿನ ಮೇಲೆ ಇವರ ಮೊಬೈಲ್ ರಿಂಗ್ ಆಗುವ ಶಬ್ದ, ಅರೆ ಇವರು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದಂತಿದೆ. ನೋಡಬೇಕೆನಿಸದಿದ್ದರು, ಮೇಲಿಂದ ಮೇಲೆ ಬರುತಿದ್ದ ಮೆಸೇಜ್ಗಳ ಹಾವಳಿ ಒಮ್ಮೆ ನೋಡುವಂತೆ ಮಾಡಿತ್ತು. ಆ ಮೊಬೈಲ್ ಕೈಗೆತ್ತಿಕೊಂಡು ನೋಡುತಿದ್ದಂತೆ............ಕುಸಿದೆ.......... ಕುಸಿದು ಬಿದ್ದೆ........... ನನ್ನ ಲೋಕ ತಲೆಕೆಳಗಾದಂತೆ ಕುಸಿದು ಬಿದ್ದೆ!!!!!!

Saturday, April 5, 2014

ದೇವರ ಹೂ



Inline image 1

ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. 

"ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"....
"ಅಲ್ಲೇ ಇಡು. ಅಲ್ಲೇ, ಅಲ್ಲೇ. ಎರಡು ಹಾರ ಜಾಸ್ತಿ ತ೦ದಿದ್ದೀ ತಾನೆ? ತುಳಸಿ ಮಾಲೆ ಬೇರೆಯಾಗಿ ಕಟ್ಟಿದ್ದೀಯ? ನಿ೦ಗೆಷ್ಟು ಸರ್ತಿ ಹೇಳೋದು, ಹೂ ತ೦ದಾಗ ದೂರದಿ೦ದ್ಲೆ ಆ ಟೇಬಲ್ ಮೇಲಿಡು ಅ೦ತ".... "ಬ೦ದಾಗ್ಲೆಲ್ಲ ಅದೂ ಇದೂ ಮುಟ್ಕೊ೦ಡೇ ಹೋಡಾಡ್ತೀಯ!", ಕೆ೦ಚಿಯ ಕಡೆ ದುರದುರನೆ ನೋಡಿ ಗೊಣಗಾಡಿದರು ಶಾ೦ತಮ್ಮ.

"ಇನ್ನೂ ಇಲ್ಲೇ ನಿ೦ತಿದ್ದೀಯ? ದುಡ್ಡು ನಾಳೆ ತಗೊ, ಎಲ್ಲ್ರೂ ಬರೊ ಹೊತ್ತಾಯ್ತು ಹೊರಡು", ಅ೦ತ ಮತ್ತೊಮ್ಮೆ ಗುಡಗಿದರು ಶಾ೦ತಮ್ಮ.

"ಇಲ್ಲಾ ಅಮ್ಮೋರೆ, ಮಗಳ ಪೀಸ್ ಕಟ್ಬೇಕು ಇಸ್ಕೂಲಿ೦ದ ವಾಪಸ್ ಕಳ್ಸೋರೆ, ಈ ತಿ೦ಗಳ್ದು ಪೂರ್ತಿ ಈಗ್ಲೆ ಕೊಟ್ಬಿಡಿ, ಈವೊತ್ತಿ೦ದು ತಿ೦ಗಳ್ದು ಎಲ್ಲಾ ಸೇರಿ 900 ಆಯ್ತು",  ಅ೦ತ ದೃಢವಾಗಿ ಅಲ್ಲಿಯೇ ನಿ೦ತಳು ಕೆ೦ಚಿ.

"ಅದ್ಯಾಕೆ ಆ ವಯ್ಯಾರ, ಸರಿಯಾಗಿ ಕೇಳು. ಇನ್ನೊ೦ದ್ಸರ್ತಿ ಮನೇಲಿ ಎಲ್ಲಾ ಮುಟ್ಕೊ೦ಡು ಹೋಡಾಡ್ಬೇಡ ಆಯ್ತ, ಬ೦ದಾಗೆಲ್ಲ ಎರಡೆರಡು ಕೆಲ್ಸ ಕೊಡ್ತೀಯ, ಮಡಿ-ಮೈಲಿಗೆ ಒ೦ದೂ ಇಲ್ಲ", ಬೈದಾಡಿಕೊ೦ಡೇ ಒಳಗಿನಿ೦ದ ದುಡ್ಡು ತ೦ದು ಟೇಬಲ್ ಮೇಲಿಟ್ಟರು ಶಾ೦ತಮ್ಮ.


"ದ್ಯಾವ್ರೆ! ಆ ಕುಡ್ಕನ್ ಕಣ್ಗೆ ಬೀಳೋಕಿನ್ಮು೦ಚೆ ಈ ದುಡ್ಡಿಗೇನೇನ್ ಬರ್ತದೊ ಎಲ್ಲಾ ತಕ್ಕೊ೦ಡು ಮನೀಕಡೆ ಹೊಳ್ಟೋಗ್ಬೇಕು", ಅ೦ತ ಗ೦ಡನನ್ನ ಶಪಿಸಿಕೊ೦ಡು ಬಶೀರಣ್ಣನ ಅ೦ಗಡಿಯ ಕಡೆ ನಡೆದಳು ಕೆ೦ಚಿ.

ಮನೆ ತಲುಪಿದಾಗ ಚಾಪೆ ಮುದುರಿಕೊ೦ಡು ಕುಳಿತಿದ್ದ ಕೆ೦ಚಿಯ ಮಗಳು, "ಇವತ್ತಾದ್ರು ಅಮ್ಮೋವ್ರಿಗೆ ಹೇಳಿದ್ಯಾ ಅಮ್ಮಯ್ಯ?" ಅ೦ತ ಸಣ್ಣದಾಗಿ ಕೇಳಿದಳು. "ಇಲ್ಲಾ ಮಗ, ಅವ್ರಿಗೆ ಹೇಳ್ದೆ ಅ೦ತಿಟ್ಕೊ ಇನ್ನ ಮಡಿ, ಮೈಲ್ಗೆ, ಅನಿಷ್ಟ ಅ೦ತ ಹನ್ನೊ೦ದು ದಿನಾನೊ ಹದ್ಮೂರ್ ದಿನಾನೊ ನಮ್ತಾವ ಹೂವೇ ತಕ್ಕಳಲ್ಲ. ಸೂತ್ಕ ತೆಗಿಯೋಗ೦ಟ ಮನೆಗೆ ಬರ್ಬೇಡ ಅ೦ತಾರೆ. ಇವತ್ತು ಪೆಶಲ್ ಪೂಜೆ, ವರ್ತನೆ ಹೂಗಿ೦ತ ದಾಸ್ತಿನೇ ಕೇಳಿದ್ರು, ನಾನೇನಾರ ಹಿ೦ಗೆ ಅ೦ದಿದ್ರೆ ಇದ್ನೂ ಬೇಡ ಅ೦ತ ಬುಟ್ಬುಡ್ತಿದ್ರಷ್ಟೇಯಾ.  ನೀನು ಅದ್ನೆಲ್ಲಾ ಯೋಚ್ನೆ ಮಾಡ್ಬೇಡ ಬುಡು, ಮುತ್ತೈದೇರ್ಗೆ ಹೇಳಿವ್ನಿ, ಎಲ್ರೂ ಬ೦ದು ನಿ೦ಗೆ ಆರ್ತಿ ಮಾಡ್ತವ್ರೆ. ನಿ೦ಗಿನ್ನು ಹಸಿ ಮೈ, ಎಲ್ಲ೦ದ್ರಲ್ಲಿ ಕೂರ೦ಗಿಲ್ಲ, ಸಿಕ್ಕಿದ್ನೆಲ್ಲ ತಿನ್ನ೦ಗಿಲ್ಲ ಆತಾ", ಅ೦ತ ತನ್ನ ಮುದ್ದಾದ ಕರುಳ ಬಳ್ಳಿಯ ಕಡೆ ಮಮತೆಯ ನೋಟ ಬೀರಿದಳು. 

ಅಷ್ಟಕ್ಕೇ ಸುಮ್ಮನಿರದ ಮಗಳು, "ನೀ ಹಿ೦ಗೆಲ್ಲ ಮಾಡಿದ್ರೆ ದ್ಯಾವ್ರಿಗೆ ಕೋಪ ಬರ೦ಗಿಲ್ವ ಅಮ್ಮಯ್ಯ?" ಅ೦ತ ತನ್ನ ಕುತೂಹಲ ಹೊರಗಿಟ್ಟಳು."ಬರ್ತದೆ, ಕೋಪಾನು ಬರ್ತದೆ, ಶಾಪಾನು ಕೊಡ್ತಾನೆ. ಅದೆಲ್ಲಾ ನ೦ಗೆ ತಾನೆ, ನಿ೦ಗಲ್ವಲ್ಲ ಬುಡು."

"ದ್ಯಾವ್ರ ಪಾದಕ್ಕೆ ಸೇರಿದ್ಮೇಲೆ ಎಲ್ಲಾ ಹೂವು ಮಡಿ ಆಗೋಗ್ತದೆ", ಅ೦ತ ಹೇಳಿಕೊ೦ಡು ಬಶೀರಣ್ಣನ ಅ೦ಗಡಿಯಿ೦ದ ತ೦ದ ಸಾಮಾನುಗಳ ಕಡೆಗೆ ಕಣ್ಣಾಡಿಸುತ್ತ ಕು೦ತಳು ಕೆ೦ಚಿ.

*  *  *  *  * 
ಶಾನಭೋಗರ ಪೂಜೆ, ಶಾ೦ತಮ್ಮನ ಮಡಿ, ಅಮ್ಮನ ಅಸಹಾಯಕತೆ - ಮಮತೆ ಇವುಗಳ ನಡುವೆ ಆ ದೇವರ ಹೂವು......... 

Wednesday, March 5, 2014

ಹೀಗೊಂದು ಮಹಿಳಾ ದಿನಾಚರಣೆ!!

ಈ ದಿನ ಎಂದಿಲ್ಲದ ಕೆಲಸ ಮನೆಯಿಂದಲೇ ಮೊದಲಾಗಿತ್ತು, ಅನಿರೀಕ್ಷಿತ ನೆಂಟರು - ಅತಿಥಿ ದೇವೋಭವ! ನಿನ್ನೆ ಸಂಜೆ ಆಫೀಸಿನಿಂದ ಹೊರಟಾಗ ತಡವಾಗಿ ಉಳಿದ ಕೆಳಸಗಳೆಲ್ಲ ಬದಿಗಿಟ್ಟು ಬಂದಿದ್ದೆ. ಈ ದಿನ ಮನೆಯಿಂದಲೇ ವಿಳಂಬ. ಹೊರಟಾಗ ನಿನ್ನೆ  ಸಂಜೆ ಮಾಡದೆ ಬಿಟ್ಟು ಬಂದ ಆಫೀಸಿನ ಕೆಲಸಗಳು ನೆನಪಾದವು, ಆತುರತುರವಾಗಿಯೇ ಆಟೋ ಹಿಡಿದು ಕಚೇರಿಗೆ  ಹೊರಟೆ.

Happy Womens Day 2012 04

ಆಫೀಸಿಗೆ ಹೆಜ್ಜೆ ಇಡುತಿದ್ದಂತೆ, "ಹ್ಯಾಪಿ ವಿಮೆನ್ಸ್ ಡೇ ಮೇಡಂ" ಅಂತ ಸೆಕ್ಯೂರಿಟಿಯ ನಗುಮೊಗದ ಸಲಾಮು! ಬ್ಯಾಗಿನಿಂದ ಆಕ್ಸಿಸ್ ಕಾರ್ಡ್ ತೆಗೆಯುತ್ತಲೇ ಒಂದು ಸ್ಮೈಲ್ ಕೊಟ್ಟು "ಥ್ಯಾಂಕ್ಸ್ ವೇಲು", ಅಂತ ಹೇಳಿ ಒಳಗೆ ನಡೆದೆ.  ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ!  ನನ್ನ ಟೇಬಲ್ಲಿನ ಮೇಲೆ ಒಂದು ಕೆಂಪು ರೋಜ ಹೂ ಒಂದು ಗ್ರೀಟಿಂಗ್ ಕಾರ್ಡು. "Happy Women's Day To Smt. Roopa Satish, from Admin Staff" ಅಂತ ಬರೆದಿತ್ತು. ಹೂ ಇಷ್ಟವಾಯ್ತು-ಹಾಗೆಯೇ ನನ್ನ ಆಫೀಸಿನ ಸ್ಟಾಫ್ ಗಳ ಆತ್ಮಿಯತೆಯೂ! ಗಾಜಿನ ಪುಟ್ಟ ಬಟ್ಟಲಿನೊಳಗೆ ನೀರು ತುಂಬಿಸಿ ಹೂವಿನ ಕಡ್ಡಿ ಮುರಿದು ಅದರೊಳಗೆ ತೇಲಿ ಬಿಟ್ಟೆ. ಇನ್ನು ಮೇಲ್ ಬಾಕ್ಸ್ ತುಂಬಾ ವಿಶೇಷವಾದ ಶುಭ ಸಂದೇಶಗಳು. ಅದರಲ್ಲಿ ಮನಸೆಳೆದ ಒಂದು ಸಂದೇಶ ನಮ್ಮ ಆಫೀಸಿನ ಹಿರಿಯರಲ್ಲಿ ಒಬ್ಬರಾದ ಜನರಲ್ ಮ್ಯಾನೇಜರ್ (GM) ರವರದ್ದು. ಹೆಣ್ಣು ಸಮಾಜದ ಕಣ್ಣು ಎನ್ನುತ್ತ ತಾಯಿ-ಮಗಳು-ಪ್ರೇಯಸಿ-ಅಕ್ಕ-ತಂಗಿಯರ ಪ್ರತಿರೂಪಗಳ ಬಗ್ಗೆ ವಿಶೇಷವಾಗಿ ವಿವರಿಸಿ ಬರೆದ ಆ ಸಂದೇಶ ಓದುವಾಗ "ಅಟ್ಟದ ಮೇಲೆ / ಬೆಟ್ಟದ ಮೇಲೆ" ಕುಳಿತ ಭಾವನೆಯೇನೋ ಮೂಡಿದ್ದು ನಿಜ. ಆದರು ಚುಟುಕಾಗಿ "ಧನ್ಯವಾದ ಸರ್" ಅಂತ ಉತ್ತರಿಸಿ ಮುಗಿಸಿದೆ. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಕಂಪನಿಯ GM ರವರಿಂದ ಒಂದು ಆಹ್ವಾನ, - "ಆಫೀಸಿನ ಎಲ್ಲಾ ಹೆಣ್ಣುಮಕ್ಕಳಿಗೂ ಈ ದಿನ ರೆಸಿಡೆನ್ಸಿ ಹೋಟೆಲಿನಲ್ಲಿ ಬುಫೆ ಲಂಚ್ ಕಂಪನಿಯವತಿಯಿಂದ" ಎಂದು.
ಆಫೀಸಿನ ಹತ್ತಿರದಲ್ಲೇ ಇದ್ದ ರೆಸಿಡೆನ್ಸಿ ಹೋಟೆಲ್ ನಲ್ಲಿ ಈ ದಿನ ಹೆಣ್ಣುಮಕ್ಕಳದ್ದೇ ಕಾರುಬಾರು. ಹೆಂಗೆಳೆಯರ ಈ ವಿಶೇಷ ಔತಣ ಕೂಟದಲ್ಲಿ GM ರವರ ಉದಾರ  ಮನೋಭಾವ, ವಿಶಾಲ ಹೃದಯ ಹಾಗು ಆತ್ಮೀಯ ಸಂದೇಶಗಳ ಕುರಿತಾಗಿಯೇ ಹೆಚ್ಚಿನ ಮಾತುಕತೆ. ನನ್ನ ಕಣ್ಣು ಮನಸೆಲ್ಲ ಅಲ್ಲಿದ್ದ ಚಿಕನ್ ಬಿರಿಯಾನಿಯ ಕಡೆಗೆ ಇದ್ದಿದ್ದು ಯಾರು ಗಮನಿಸಿರಲಾರರು, ಅಥವ ಗಮನಿಸಿದರೂ ಏನಂತೆ ಬಿರಿಯಾನಿ ತಿನ್ನದೇ ಹೋದರೆ - ಬಿರಿಯಾನಿಯಾದ ಕೋಳಿ ಬೇಜಾರು ಮಾಡಿಕೊಂಡೀತು. ಕೆಲಸವಿದ್ದ ಕಾರಣ ಊಟ ಮುಗಿಸಿ ಹೋಟೆಲಿನಿಂದ ಒಬ್ಬಳೆ ಆಫೀಸಿಗೆ ಬಿರಬಿರನೆ ಹೊರಟು ಬಂದೆ.

ಶೋನು ನಿಜಮ್ : ಹೇಳೋದೊಂಥರ - ಕೇಳೋದೊಂಥರ
ಕಿವಿಗೆ ಈಯರ್ ಫೋನ್ ಹಾಕಿಕೊಂಡು ಸೋಮೇಶ ಮೆಟ್ಟಿಲಿನ ಮೇಲೆ ಕುಳಿತಿದ್ದ. "ಹೋಯ್ ಸೋಮ ಯಾವ್ ಹಾಡು?" ಹುಬ್ಬೇರಿಸಿ ಕೇಳಿದೆ. ಇಡೀ ಆಫೀಸಿನಲ್ಲಿ ಕನ್ನಡ ಹಾಡುಗಳನ್ನ ಕೇಳುವ ಏಕೈಕ ಕ೦ದ ನಮ್ಮ ಆಫಿಸ್ ಬಾಯ್ ಸೋಮೇಶ. "ಹೇಳೋದೊಂಥರ ಥರ ಕೇಳೋದೊಂಥರ ಥರ ಹಾಡು, ಷೋಣು ನಿಜಮ್ ಮೇಡಂ" ಅಂದ. ನಗು ಬಂದರು ಸಾವರಿಸಿಕೊಂಡು, "ನಿನ್ನ ತಲೆ, ಅದು ಹೇಳಲೊಂಥರ ಥರ, ಕೇಳಲೊಂಥರ ಥರ ಕಣೋ, ಆಮೇಲೆ ಹಾಡಿರೋದು ಷೋಣು ನಿಜಮ್ ಅಲ್ಲ ಸೋನು ನಿಗಮ್, ಕೊಲೆ-ಕೊಲೆ ಮಾಡ್ಬಿಡ್ತೀನಿ ತಪ್ಪು ತಪ್ಪಾಗಿ ಹೆಸರನೆಲ್ಲ ಹೇಳಿದ್ರೆ ಗೊತ್ತಾಯ್ತ" ಅಂತ ಅವನ ಕಾಲೆಳೆದು ನನ್ನ ಸೀಟಿಗೆ ಬಂದೆ.

ಕಿತ್ತಳೆ ಹಣ್ಣು ಸುಲಿಯದಿದ್ದರೆ!!!
ಆಗಲೇ ಪಕ್ಕದ ರೂಮಿನಿಂದ ಜೋರಾಗಿ ಕೇಳಿ ಬರ್ತಿದ್ದ GM ರವರ ಮಾತುಗಳು ಬೇಡವೆಂದರೂ ಕಿವಿಯ ಮುಟ್ಟಿತು . ತೆಲುಗಿನಲ್ಲಿ ಹೆಂಡತಿಯನ್ನು ಕೀಳಾಗಿ ಕೆಟ್ಟ ಮಾತುಗಳಿಂದ ಬಯ್ಯುವುದು ಕೇಳಿದವು! ಮನೆಗೆ ಬಂದರೆ ನಾಕು ಬಾರಿಸಿ ಬಿಡುವೆ ಎಂದು ಅರಚುತಿದ್ದರು. ಕಾರಣ? ಇವರ ಊಟದ ಡಬ್ಬಿಯಲ್ಲಿದ್ದ ಸಂಡಿಗೆ ಸರಿಯಾಗಿ ಕರಿದಿರಲಿಲ್ಲ,  ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದಿರಲಿಲ್ಲ!!!!!  ಬಹುಶ ನಾನಿರುವುದು ಅವರಿಗೆ ತಿಳಿದಂತಿರಲಿಲ್ಲ. ಇವರ ಮಾತುಗಳನ್ನ ಕೇಳುತಿದ್ದಂತೆ ಇವರ ಮುಂದೆ ಹೋಗಿ ತಿನ್ದದೆಲ್ಲ ಕಕ್ಕಿಬಿಡುವ ಹಾಗೆ ಅನಿಸಿತ್ತು, ಆ ಹೂವು, ಗ್ರೀಟಿಂಗ್ ಕಾರ್ಡು, ಅವರು ಕಳಿಸಿದ್ದ ಮೇಲ್ ಎಲ್ಲವನ್ನು ಹರಿದು ಮುಖದ ಮೇಲೆ ಎಸೆದು ಬರಬೇಕೆನಿಸಿತು. ತನ್ನ ಮನೆಯ ದೀವಿಗೆ - ತನ್ನ ಮಡದಿ! ಸಮಾಜದಲ್ಲಿ ತನಗೆ ದೊರೆತ ಸ್ಥಾನ ಮಾನಗಳಲ್ಲಿ ಪಾಲುದಾರಳು, ಇವನ ಹೊರ ಪ್ರಪಂಚದ ಹಸಿ ಗುಟ್ಟುಗಳೆಲ್ಲ ತಿಳಿದೋ-ತಿಳಿಯದೆಯೋ ಇವನಿಗಾಗಿ ಜೀವ ತೇಯುವ ಶ್ರೀಮತಿ.  ತನ್ನ ಮನೆಯ ಸ್ತ್ರೀಯರನ್ನು ಗೌರವಿಸದೆ ಸಮಾಜದ ಮುಂದೆ ಧರಿಸುವ ಮುಖವಾಡದ ಇವರ ಬದುಕಿಗೆ ದಿಕ್ಕಾರವೆಸೆದೆ. 
ಇನ್ನೊಂದು ತಾಸಿನಲ್ಲಿ GM ರವರು ಎದ್ದು ಬಂದು, "ದಿಸ್ ವೀಕೆಂಡ್ ಐ ಆಮ್ ಟೂ ಬಿಜಿ ವಿಲ್ ಕ್ಲೀನ್ ಮೈ ಕಾರ್ ಅ೦ಡ್ ಗರಾಜ್" ಅಂತ ಯಾರಿಗೋ ಹೇಳಿಕೊಂಡು ರೋದಿಸುತ್ತಿರುವುದು ಕೇಳಿಬಂತು. ಮನೆ, ಕಾರು, ಮೋಟಾರು ಕ್ಲೀನ್ ಆಗುವ ಕೆಲಸವೇನೋ ಸರಿ ಸರ್, ನಿಮ್ಮ ಮನಸು ಕ್ಲೀನ್ ಆಗಲಿಕ್ಕೆ???

ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ
ಹೀಗಂದುಕೊಂಡು ಬಾಟಲಿಯ ನೀರನ್ನು ಪೂರ್ತಿಯಾಗಿ ಕುಡಿದು ಮುಗಿಸಿದೆ. ನನ್ನ ದೈನಿತ್ಯದ ಕೆಲಸ ಕಾರ್ಯಗಳ ನಡುವೆ ಆರ್ಕುಟ್ನ ನನ್ನ 3K-ಸಮುದಾಯಕ್ಕೆ ಆಗಾಗ ಬೇಟಿಯಾಗುವುದು ರೂಡಿ. ಈ ದಿನದ ಕವನಗಳ ಮೇಲೊಂದು ಕಣ್ಹಾಯಿಸಿ - ಮೆಚ್ಚುಗೆ ವ್ಯಕ್ತಪಡಿಸಿ - ಸಂತೃಪ್ತಳಾಗುವ ಈ ಹವ್ಯಾಸ ಮುದ ನೀಡಿತ್ತು. ಅನೇಕ ವಿಷಯಗಳ ಬಗ್ಗೆ ಕುತೂಹಲವೆಸಗುವ ಕವನಗಳ ನಡುವೆ ನಿಬ್ಬೆರಗಾಗಿ ನಿಂತ ಅನುಭವ. ಈ ದಿನದ ಕವನಗಳು ವಿಶೇಷವಾಗಿ ಹೆಣ್ಣಿನ ಕುರಿತು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು! ಈಗಷ್ಟೇ ಶುರುವಾದ ಈ ಸಮುಧಾಯ ಮುಕ್ತವಾಗಿ ಮಾತನಾಡುವ ಧೈರ್ಯ ಮಾಡಲು ಯತ್ನಿಸುತಿದ್ದೆ. ಹೇಳಬೇಕೆಂದರೆ ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. ಈ ಸ್ನೇಹ - ಈ ಬಂಧ ಎಲ್ಲಿಗೆ ಮುಟ್ಟುವುದೋ! ಇದರ ನಡುವೆ ಯಾರೋ "ರೂಪಕ್ಕ" ಅಂತ ಕರೆದಂಗಾಯ್ತು, ಯಾರದು? ಕಣ್ಣಾಲಿಗಳಲ್ಲಿ ಎರಡು ಬಿಂದು ಥಟ್ಟನೆ ಜಾರಿತ್ತು? ಹೆಚ್ಚಿಗೆ ಮಾತನಾಡದೆ ಆರ್ಕುಟ್ನಿಂದ ಹೊರಬಂದೆ. "ರೂಪಕ್ಕ" ಅನ್ನುವ ಶಬ್ದ ಬರೆ ಹೆಸರಾಗಿರಲಿಲ್ಲ...... ಮನದಾಳದಿ ಅವಿತ, ನಿತ್ಯ ಕಾಡುವ, ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ! ಇನ್ನುಳಿದರ್ಧ ದಿನ ಭಾರವಾಯ್ತು! ಯಾಕೆ?

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...